ಮಂಗಳೂರು : ಗುಂಡು ಹಾರಿಸಿ ಪತ್ನಿಯನ್ನು ಕೊಲೆ ಮಾಡಿದ ವ್ಯಕ್ತಿ ರಬ್ಬರ್ ಆ್ಯಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದ ಕೆಮ್ರಾಜೆ ಗ್ರಾಮದ ಕೋಡಿಮಜಲುವಿನಲ್ಲಿ ನಡೆದಿದೆ.
ವಿನೋದ ಕುಮಾರಿ ಕೊಲೆಯಾದ ಮಹಿಳೆ. ರಾಮಚಂದ್ರ ಗೌಡ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈ ಬಗ್ಗೆ ದಂಪತಿಯ ಪುತ್ರ ಪ್ರಶಾಂತ್ ಅವರು ಎಸ್ ಆರ್ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.
ಪ್ರಶಾಂತ್ ನೀಡಿದ ದೂರಿನ ವಿವರ: ತಂದೆ ರಾಮಚಂದ್ರ ಗೌಡರವರು ಯಾವಾಗಲು ವಿಪರೀತ ಮದ್ಯಪಾನ ಮಾಡುವ ಚಟವುಳ್ಳವರಾಗಿದ್ದು, ಎಂದಿನಂತೆ ವಿಪರೀತ ಮದ್ಯಪಾನ ಮಾಡಿ ಜ. 17 ರಂದು ರಾತ್ರಿ ಮನೆಗೆ ಬಂದಿದ್ದರು. ರಾತ್ರಿ ಅಜ್ಜ, ಅಜ್ಜಿ ಮತ್ತು ತಾಯಿಗೆ ಬೈಯುತ್ತಿದ್ದವರು. 11-30ರ ವೇಳೆಗೆ ನಿರ್ಮಾಣ ಹಂತದಲ್ಲಿರುವ ಮನೆಯ ಅಡುಗೆ ಕೋಣೆಯೊಳಗೆ ಹೋಗಿದ್ದಾರೆ. ಅಲ್ಲಿ ತಾಯಿ ವಿನೋದ ಕುಮಾರಿ ಅವರೊಂದಿಗೆ ಜಗಳ ಮಾಡಿ, ಕೈಯಲ್ಲಿದ್ದ ಕೋವಿಯಿಂದ ತಾಯಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಆ ಬಳಿಕ ರಬ್ಬರ್ ಆ್ಯಸಿಡ್ ಕುಡಿದು ಮೃತಪಟ್ಟಿದ್ದಾರೆ ಎಂದು ಪ್ರಶಾಂತ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಪೊಲೀಸ್ ಠಾಣಾ ಅ.ಕ್ರ : 09/2025 ಕಲಂ: 103BNS2023 ಕಲಂ 25.27 ಆರ್ಮ್ಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ಅಮಿತ್ ಸಿಂಗ್ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯತೀಶ್ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ : ಹಾಸನ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ - MURDER CASE