ಚಿಕ್ಕಮಗಳೂರು : ಜಿಲ್ಲೆಯ ಎನ್ ಆರ್ ಪುರ ತಾಲೂಕಿನ 50ಕ್ಕೂ ಹೆಚ್ಚು ರಾಮ ಭಕ್ತರು ಅಯೋಧ್ಯೆಯ ಬಾಲ ರಾಮನ ದರ್ಶನಕ್ಕೆ ಹೊರಟಿದ್ದಾರೆ. ಅಯೋಧ್ಯೆಗೆ ಹೋಗುವ ಮುನ್ನ ಜಿಲ್ಲೆಯ ಎನ್. ಆರ್ ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಮಾರ್ಕಂಡೇಶ್ವರ ದೇವಾಲಯಕ್ಕೆ ಮಲೆನಾಡಿನ ಅಡಿಕೆಯ ಹಿಂಗಾರವನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಅದೇ ಹಿಂಗಾರವನ್ನು ಅಯೋಧ್ಯೆಯ ರಾಮನಿಗೆ ಪೂಜೆ ಸಲ್ಲಿಸಲು ಕೊಂಡೊಯ್ದಿದ್ದಾರೆ.
ಮಲೆನಾಡಿನಲ್ಲಿ ನಾನಾ ರೀತಿಯ ಸಮಸ್ಯೆಗಳಿವೆ. ಹಳದಿ ಎಲೆ ರೋಗದಿಂದ ಅಡಿಕೆ ಬೆಳೆಗಾರರ ಬದುಕು ಬೀದಿಗೆ ಬಂದಿದೆ. ಹಾಗಾಗಿ ನಮ್ಮ ಸಮಸ್ಯೆಯನ್ನು ಬಗೆಹರಿಸು ಭಗವಂತ ಎಂದು ಮಾರ್ಕಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಮಲೆನಾಡಿನ ಹಿಂಗಾರು ಸಮೇತ ಅಯೋಧ್ಯೆಗೆ ಹೊರಟಿದ್ದಾರೆ. ಅದೇ ಹಿಂಗಾರದಲ್ಲಿ ಅಯೋಧ್ಯೆಯ ರಾಮಲಲ್ಲಾನಿಗೆ ಪೂಜೆ ಸಲ್ಲಿಸಿ, ಸಮಸ್ಯೆ ಬಗೆಹರಿಸುವಂತೆ ಬೇಡಿಕೊಳ್ಳಲಿದ್ದಾರೆ.
ಇವತ್ತು ವಿಶ್ವಹಿಂದೂ ಪರಿಷತ್ನ ಎಲ್ಲ ಕಾರ್ಯಕರ್ತರು ರೈತರು ಬೆಳೆದಂತಹ ಅಡಿಕೆ ಹಿಂಗಾರು ಬೆಳೆಯನ್ನು ಸಂಗ್ರಹಮಾಡಿ, ಅಯೋಧ್ಯೆಗೆ ತೆಗೆದುಕೊಂಡು ಹೋಗುವಂತಹ ಕೆಲಸ ಆಗುತ್ತಿದೆ. ಮತ್ತು ಬೆಳೆದಂತಹ ಅಡಿಕೆ ಹಾಗೂ ಭತ್ತವನ್ನು ಕೂಡಾ ತೆಗೆದುಕೊಂಡು ಹೋಗಿ ರಾಮನಪಾದಕ್ಕೆ ಅರ್ಪಣೆ ಮಾಡಿ, ಸಾಮೂಹಿಕವಾಗಿ ಪ್ರಾರ್ಥನೆ ಮಾಡಲಿದ್ದೇವೆ. ಮಲೆನಾಡಿಗೆ ಇತ್ತೀಚಿಗೆ ಬಂದಂತಹ ಕಾನೂನು, ಬೆಳೆ ನಾಶ ಹಾಗೂ ಮುಂದಿನ ದಿನಗಳಲ್ಲಿ ಎಲ್ಲ ರೈತರ ಬದುಕು ಉತ್ತಮ ರೀತಿಯಲ್ಲಿ ಸಾಗಬೇಕು ಎಂಬ ದೃಷ್ಠಿಯಿಂದ ನಾವು ಪ್ರಾರ್ಥಿಸಲಿದ್ದೇವೆ. ನಾವು ರಾಮನ ದರ್ಶನ ಮಾಡುವ ದಿನ ಹಿಂಗಾರದಿಂದ ಅಲಂಕಾರ ಮಾಡಲಾಗುತ್ತದೆ. ಮಲೆನಾಡಿಗೆ ಬಂದ ಆಪತ್ತುಗಳು ಆದಷ್ಟು ಬೇಗ ನಿವಾರಣೆಯಾಗಬೇಕು ಎಂದು ಬೇಡಿಕೊಳ್ಳಲಿದ್ದೇವೆ ಎಂದು ವಿಶ್ವಹಿಂದೂ ಪರಿಷತ್ನ ಮುಖಂಡರು ತಿಳಿಸಿದರು.
ಇದನ್ನೂ ಓದಿ : ರಾಮನಗರದಲ್ಲಿದೆ ಶ್ರೀರಾಮನ ಪಾದ ಸ್ಪರ್ಶಿಸಿದ ಪವಿತ್ರ ಸ್ಥಳ