ಚಾಮರಾಜನಗರ: ವಾಲ್ಮೀಕಿ ಜಯಂತಿ ಸರ್ಕಾರದ ಕಾರ್ಯಕ್ರಮವನ್ನು ನಾಯಕ ಸಮುದಾಯವು ಬಹಿಷ್ಕರಿಸಿ, ಜಿಲ್ಲಾಡಳಿತಕ್ಕೆ ಸಡ್ಡು ಹೊಡೆದಿದೆ.
ಚಾಮರಾಜನಗರ ಜಿಲ್ಲಾಡಳಿತ ಭವನ ಆವರಣದಲ್ಲಿ ವಾಲ್ಮೀಕಿ ಮಹರ್ಷಿ ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜೆ ಮಾಡದಿರುವುದರಿಂದ ಅಸಮಾಧಾನಗೊಂಡಿರುವ ನಾಯಕ ಸಮುದಾಯದವರು ಸರ್ಕಾರಿ ಕಾರ್ಯಕ್ರಮಕ್ಕೆ ಸಡ್ಡು ಹೊಡೆದು ಪರ್ಯಾಯವಾಗಿ ಜಯಂತಿ ಆಚರಣೆ ಮಾಡುತ್ತಿದ್ದಾರೆ.
10 ವರ್ಷದ ಕನಸು: ನಾಯಕ ಸಮುದಾಯದ ಮುಖಂಡ ಪು. ಶ್ರೀನಿವಾಸನಾಯಕ ಮಾತನಾಡಿ, 10 ವರ್ಷಗಳಿಂದ ಪುತ್ಥಳಿ ನಿರ್ಮಾಣ ಯೋಜನೆ ನನೆಗುದಿಗೆ ಬಿದ್ದಿದೆ. ಜಿಲ್ಲಾಡಳಿತಕ್ಕೆ ಪುತ್ಥಳಿ ಗುದ್ದಲಿ ಪೂಜೆಗೆ ಗಡುವು ಕೊಟ್ಟಿದ್ದರೂ ನಿರ್ಲಕ್ಷ್ಯ ವಹಿಸಿದ್ದರಿಂದ ಸರ್ಕಾರಿ ಕಾರ್ಯಕ್ರಮ ಬಹಿಷ್ಕರಿಸಿ ನಾವೇ ಅದ್ಧೂರಿ ಮೆರವಣಿಗೆ ನಡೆಸುತ್ತಿದ್ದೇವೆ ಎಂದರು.
ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಸಮುದಾಯದ ಮುಖಂಡರೇ ಗುದ್ದಲಿ ಪೂಜೆ ನಡೆಸುತ್ತೇವೆ. ಇದಕ್ಕೆ ಅಡ್ಡಿಪಡಿಸಿದರೇ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ರವಾನಿಸಿದರು.
ಪೊಲೀಸ್ ಸರ್ಪಗಾವಲಿನಲ್ಲಿ ಕಾರ್ಯಕ್ರಮ: ಜಿಲ್ಲಾಡಳಿತ ಭವನ ಆವರಣದಲ್ಲಿ ನಾಯಕ ಸಮುದಾಯದಿಂದ ಗುದ್ದಲಿ ಪೂಜೆ ಪ್ಲಾನ್ ಹಿನ್ನೆಲೆ ಜಿಲ್ಲಾಡಳಿತ ಭವನದಲ್ಲಿ ಭಾರಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಸಚಿವರಿಗೂ ಕೂಡ ಜಿಲ್ಲಾ ಮೀಸಲು ಪಡೆ ಭದ್ರತೆ ಕೊಟ್ಟಿದ್ದು ಪೊಲೀಸ್ ಸರ್ಪಗಾವಲಿನಲ್ಲಿ ಸರ್ಕಾರದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಡೆದಿದೆ.
ಸಿದ್ದರಾಮಯ್ಯ ಅಸ್ತು ಎಂದಿದ್ದಾರೆ: ಪರ್ಯಾಯ ವಾಲ್ಮೀಕಿ ಜಯಂತಿ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಮಾಧ್ಯಮದವರೊಂದಿಗೆ ಮಾತನಾಡಿ, ದಿನಾಂಕ ನಿಗದಿ ಮಾಡಿ, ವಾಲ್ಮೀಕಿ ಪುತ್ಥಳಿ ನಿರ್ಮಾಣದ ಭೂಮಿಪೂಜೆಯನ್ನು ತಾವೇ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ಕೊಟ್ಟಿದ್ದಾರೆ. ವಾಲ್ಮೀಕಿ ಮಹರ್ಷಿ ಪುತ್ಥಳಿ ಜೊತೆ ಕನಕದಾಸರು, ಭಗಿರಥ ಮಹರ್ಷಿ ಪುತ್ಥಳಿಯನ್ನೂ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಮನಸ್ಸಿಗೆ ಬಂದಂತೆ ಮಾಡಲು ಆಗುವುದಿಲ್ಲ, ಕಾರ್ಯರೂಪಕ್ಕೆ ತಕ್ಕಂತೆ ಮಾಡಬೇಕು. ಇಷ್ಟರ ಮೇಲೆ ಪರ್ಯಾಯವಾಗಿ ವಾಲ್ಮೀಕಿ ಜಯಂತಿ ಮಾಡಿದರೆ ನಾವು ಹೊಣೆಗಾರರಲ್ಲ ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ಚಾಮರಾಜನಗರದಲ್ಲಿ ಮಳೆ ಆರ್ಭಟಕ್ಕೆ ಮತ್ತೆ ಕೆರೆಗಳು ಕೋಡಿ: ಕೆರೆ ಏರಿ ಒಡೆಯುವ ಭೀತಿಯಲ್ಲಿ ಜನ