ತುಮಕೂರು: "ಯಾರೋ ನೋಡಿಕೊಂಡು ಬಂದ ಹೆಣ್ಣನ್ನು ನಾನು ಮದುವೆಯಾಗುವುದಿಲ್ಲ" ಎಂದು ಮಾಜಿ ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ನವರು ಅಭ್ಯರ್ಥಿಯನ್ನು ಬದಲಾಯಿಸಿ ನಿಮಗೆ 'ಬಿ ಪಾರ್ಮ್' ಕೊಟ್ಟರೆ ನಿಲ್ಲುತ್ತೀರಾ ಎಂದು ಕೇಳುತ್ತಿದ್ದಾರೆ. ಆದರೆ ನಾನು ಖಂಡಿತಾ ಚುನಾವಣೆಗೆ ನಿಲ್ಲಲ್ಲ. ಬಿ ಪಾರ್ಮ್ ಅನ್ನು ಕಾಂಗ್ರೆಸ್ನವರು ಕೊಟ್ಟರೂ ನಿಲ್ಲುವುದಿಲ್ಲ. ಬಿಜೆಪಿಯವರು ಮತ್ತೆ ಕರೆದರೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಅಂಥ ಮಟ್ಟಕ್ಕಿಳಿದು ರಾಜಕೀಯ ಮಾಡಲು ನನಗಿಷ್ಟ ಇಲ್ಲ. ಸೋಮಣ್ಣನವರು ಬೇಡ ನೀವೇ ನಿಲ್ಲಿ ಅಂತ ಕರೆದರೂ ನಾನು ಹೋಗಲ್ಲ. ನಾನು ಕಾಂಗ್ರೆಸ್ ಜೊತೆ ಈ ಬಗ್ಗೆ ಚರ್ಚೆಯೇ ಮಾಡಿಲ್ಲ" ಎಂದು ಸ್ಪಷ್ಟನೆ ನೀಡಿದರು.
"ನಾನು ಕಾಂಗ್ರೆಸ್ ಪಕ್ಷಕ್ಕೆ ಬರುತ್ತೇನೆ ಎಂದಾಗಲಿ, ಬರುವುದಿಲ್ಲ ಎಂದಾಗಲಿ ಹೇಳಿಲ್ಲ. ಯಾವುದೇ ಆಮಿಷಗಳಿಲ್ಲ. ಬಿಜೆಪಿಯಿಂದ ಆರ್.ಅಶೋಕ್, ಜಯರಾಮ್, ಗೋಪಾಲಯ್ಯನವರು ಮನೆಗೆ ಬಂದಿದ್ದರು. ನನಗೆ ಸಂಕಟ, ಬೇಸರ ಇರುವುದು ಯಡಿಯೂರಪ್ಪನವರ ಮೇಲೆ. ಸುಮ್ಮನೆ ಮನೆಯಲ್ಲಿದ್ದ ನನ್ನನ್ನು ಮೂರು ನಾಲ್ಕು ಸಲ ಫೋನ್ ಮಾಡಿ ಕರೆದು ಈಗ ಟಿಕೆಟ್ ನೀಡದೇ ಈ ರೀತಿ ಮಾಡಿದ್ದಾರೆ. ನಾನು ಯಡಿಯೂರಪ್ಪನವರಿಗೆ ಅಂತಹದ್ದೇನು ಮಾಡಿದ್ದೇನೆ?. ಮೊದಲು ನನ್ನ ಚುನಾವಣೆಗೆ ನಿಲ್ಲಲೇಬೇಕು ಎಂದು ಒತ್ತಾಯಿಸಿ ಈಗ ಇಷ್ಟು ಅವಮಾನ ಮಾಡಲು ಏನು ಕಾರಣ?".
"ಟಿಕೆಟ್ ಹಂಚಿಕೆಯಲ್ಲಿ ಯಡಿಯೂರಪ್ಪನವರಿಗೆ ಯಾವುದೋ ಸನ್ನಿವೇಷದಿಂದ ತೊಂದರೆ ಬಂದಿರಬಹುದು ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ಒಂದು ಬಾರಿ ನನ್ನ ಕರೆದು ಚರ್ಚೆ ಮಾಡಬಹುದಿತ್ತಲ್ಲ?. ಇದೆಲ್ಲದರ ಸಂಕಟ ನನಗಿದೆ. ನೀವೆಲ್ಲ ಇದಕ್ಕೆ ಉತ್ತರ ಹೇಳಲು ಸಾಧ್ಯವಿಲ್ಲ. ನಾನು ಯಡಿಯೂರಪ್ಪನವರು ಮಾತನಾಡಬೇಕಿತ್ತು. ಆದರೆ ಅವರಿಗೆ ಮಾತನಾಡುವಷ್ಟು ಸೌಜನ್ಯವಿಲ್ಲ. ಅಂದ ಮೇಲೆ ನೀವು ಬಂದು ಏನು ಮಾಡುತ್ತೀರಿ? ಎಂದು ನಾನು ಅಶೋಕ್ ಅವರಿಗೆ ಮನದಟ್ಟು ಮಾಡಿದ್ದೇನೆ" ಎಂದು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ: ಮತದಾನ ಮಾಡದವರು ನಿಜವಾದ ದೇಶದ್ರೋಹಿಗಳು: ನಾನಾ ಪಾಟೇಕರ್