ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಭಾರಿ ಮಳೆಯಿಂದ ಕಡೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮದಗದ ಕೆರೆ ಕೋಡಿ ಬಿದ್ದಿದೆ. ಈ ಹಿನ್ನೆಲೆ ಕೆರೆಯಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಗೆ ಹರಿಯುತ್ತಿದೆ. ಇದರಿಂದ ಹೊಲ-ಗದ್ದೆ, ಅಡಿಕೆ ತೋಟಗಳಿಗೆ ನೀರು ನುಗ್ಗಿದೆ.
ಮದಗದ ಕೆರೆ ಸುತ್ತಲಿನ ಹಳ್ಳಿಗಳಲ್ಲಿನ ಗದ್ದೆಗಳಲ್ಲಿ ಬೆಳೆದಿದ್ದ ಶುಂಠಿ, ಜೋಳ ನಾಶವಾಗಿದೆ. ಬೆಳೆ ನಾಶದಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಮತ್ತೊಂದೆಡೆ, ಸೇತುವೆ ಜಲಾವೃತಗೊಂಡಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ.
ಭಾರಿ ಮಳೆ ಮಧ್ಯೆ ಕಾಡಾನೆಗಳ ಕಾಟ: ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆ ಮಧ್ಯೆ ಮಲೆನಾಡಲ್ಲಿ ಕಾಡಾನೆಗಳ ಉಪಟಳ ಶುರುವಾಗಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಪುರ, ಗಬ್ಬಳ್ಳಿ, ಕಾರ್ಬೈಲು ಗ್ರಾಮ ಸುತ್ತಮುತ್ತ 18 ಕಾಡಾನೆಗಳ ಹಿಂಡು ತಿರುಗಾಡುತ್ತಿವೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಕಾಡಾನೆಗಳ ಹಿಂಡು ದಿನಕ್ಕೊಂದು ಹಳ್ಳಿ ಭಾಗದಲ್ಲಿ ಕಾಣಿಸಿಕೊಳ್ಳುತ್ತಿವೆ. ಕಾಡಾನೆಗಳ ಹಿಂಡಿನಿಂದ ಕಾಫಿ ತೋಟಗಳು ನಾಶವಾಗಿವೆ. ಆನೆಗಳನ್ನ ಓಡಿಸುವಂತೆ ಮೂಡಿಗೆರೆಯ ಗ್ರಾಮೀಣ ಭಾಗದ ಜನರು ಆಗ್ರಹಿಸಿದ್ದಾರೆ.