ದಾವಣಗೆರೆ: "ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಪರವಾಗಿ ವಕಾಲತ್ತು ವಹಿಸಿ ಕಾಂಗ್ರೆಸ್ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅವರು ಪ್ರಭಾವಿ ಸಚಿವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ" ಎಂದು ಮಾಜಿ ಸಚಿವ ರೇಣುಕಾಚಾರ್ಯ ದೂರಿದರು.
ದಾವಣಗೆರೆಯ ಶಿರಮಗೊಂಡನಹಳ್ಳಿಯ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಅವರ ನಿವಾಸದಲ್ಲಿಂದು ಸಭೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಯತ್ನಾಳ್ ಪದೇ ಪದೆ ರಾಜ್ಯ ಸರ್ಕಾರವನ್ನು ಪತನಗೊಳಿಸಲು ನಾಯಕರೊಬ್ಬರು ಸಾವಿರ ಕೋಟಿ ರೂ ತೆಗೆದಿಟ್ಟಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ. ಸೂಟ್ ಹಾಕಿಕೊಂಡು ನಾನೇ ಸಿಎಂ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಯತ್ನಾಳ್ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು" ಎಂದು ಒತ್ತಾಯಿಸಿದರು.
"ಬೆಳಗಾವಿಯ ಮಾಜಿ ಸಚಿವರೇ(ರಮೇಶ್ ಜಾರಕಿಹೊಳಿ) ನಿಮಗೆ ಅನ್ಯಾಯವಾಗಿದ್ದರೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ. ಅದನ್ನು ಬಿಟ್ಟು ಪಕ್ಷವನ್ನು ಸ್ವಚ್ಛ ಮಾಡುತ್ತೆವೆನ್ನುವ ನೀವು ಯಾವ ಪಕ್ಷದಿಂದ ಬಂದಿದ್ದೀರಿ?. ಕಾಂಗ್ರೆಸ್ನಿಂದ ಬಿಜೆಪಿಗೆ ಬಂದಾಗ ಬಿ.ಎಸ್.ಯಡಿಯೂರಪ್ಪ ಅವರನ್ನು ಇಂದ್ರ, ಚಂದ್ರ ಎಂದು ಹೊಗಳಿದ್ರಿ. ಜಲಸಂಪನ್ಮೂಲ ಇಲಾಖೆ ಖಾತೆ ಪಡೆದ್ರಿ. ನಿಮಗೆ ಅನ್ಯಾಯ ಆಗಿದೆ ಎಂದರೆ ವರಿಷ್ಠರನ್ನು ಭೇಟಿ ಮಾಡಿ. ಅದನ್ನು ಬಿಟ್ಟು ಭಿನ್ನಮತೀಯ ಸಭೆ ಮಾಡುವುದು ಎಷ್ಟು ಸರಿ?. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮಾತನಾಡುವ ಯಾವ ನೈತಿಕತೆ ಇದೆ ನಿಮಗೆ" ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಮಾತನಾಡಿ, "ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತೆತ್ತಿದ್ದರೆ ಸಾವಿರ ಕೋಟಿ ಅಂತಾರೆ, ಅವರು ಎಷ್ಟು ಕೋಟಿ ಖರ್ಚು ಮಾಡಿ ಗೆದ್ದಿದ್ದಾರೆ ಎಂಬುದು ಮುಖ್ಯ. ಹೀಗಾಗಿ ಈ ರೀತಿ ಮಾತನಾಡದೆ ಒಳ್ಳೆಯದಾಗಿ ಮಾತನಾಡುವುದನ್ನು ಕಲಿಯಲಿ" ಎಂದರು.
"ಮಾಜಿ ಸಂಸದರು ಶಾಮನೂರು ಶಿವಶಂಕರಪ್ಪ, ಮಲ್ಲಿಕಾರ್ಜುನ್ ಗೆದ್ದಿದ್ದಾರೆ. ನೀವು ಸತತವಾಗಿ ಐದು ಸಲ ಗೆದ್ದಿದ್ದೀರಿ. ಒಂದು ಬಾರಿ ಸೋತಿದ್ದಕ್ಕೆ ಟೀಕಿಸುವುದು ಸರಿಯಲ್ಲ. ಎಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟನೆಗಾಗಿ ಕೆಲಸ ಮಾಡೋಣ" ಎಂದು ಮನವಿ ಮಾಡಿದರು.
ಚನ್ನಗಿರಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, "ಬಿ.ವೈ.ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಬಿಜೆಪಿ ಬೆಳೆಯುತ್ತಿದೆ. ಅವರ ನಾಯಕತ್ವದಲ್ಲಿ ಮುಡಾ ಪಾದಯಾತ್ರೆ ಮಾಡಿದ್ದಾರೆ. ಅವರ ನಾಯಕತ್ವ ಒಪ್ಪಿಕೊಳ್ಳವುದಿಲ್ಲ ಎಂದು ಹೇಳುವವರು ವರಿಷ್ಠರಿಗೆ ಅಪಮಾನ ಮಾಡಿದ್ದಂತೆ. ಸ್ವಪಕ್ಷದವರೇ ಪ್ರತಿಪಕ್ಷ ನಾಯಕರಂತೆ ಮಾತನಾಡುವುದು ಎಷ್ಟು ಸರಿ?. ನ್ಯೂನತೆಗಳಿವೆ, ಅದನ್ನು ಸರಿಪಡಿಸಿಕೊಂಡು ಹೋಗಬೇಕಾಗಿದೆ. ನಾವು ಒಗ್ಗಟ್ಟಾಗಬೇಕು, ಪಕ್ಷವನ್ನು ಬಲಪಡಿಸಬೇಕು" ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: ಮುಡಾ ಸೈಟ್ ವಾಪಸ್: ರಾಜಕೀಯ ತೇಜೋವಧೆ ಮನಗಂಡು ಪತ್ನಿಯಿಂದ ಸ್ವತಂತ್ರ ತೀರ್ಮಾನ- ಸಿಎಂ - CM Siddaramaiah