ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ. ಜಾಧವ್ ಅವರ ಮನೆ, ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ಮಾಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಜಾಧವ್ ಅವರು ಪಾಲಿಕೆಯಲ್ಲಿ ಉಪ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಕೆ ಆರೋಪದ ಮೇಲೆ ಆರ್.ಪಿ. ಜಾಧವ ಸಂಬಂಧಿತ ಆಸ್ತಿ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಬಿ.ಕೆ. ಉಮೇಶ ನೇತೃತ್ವದಲ್ಲಿ ಮೂರು ತಂಡಗಳಲ್ಲಿ ದಾಳಿ ನಡೆಸಲಾಗಿದೆ.
ನಗರದ ಎನ್‌ಜಿಒ ಕಾಲೋನಿಯ ಮನೆ, ಫರಹತಾಬಾದ್ ಸಮೀಪದ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಲಾಯಿತು. ಅಲ್ಲದೆ ಪಾಲಿಕೆಯ ಅವರ ಕಚೇರಿಯಲ್ಲಿಯೂ ಶೋಧ ಕಾರ್ಯ ಮಾಡಲಾಗಿದೆ. ದಾಳಿ ವೇಳೆ ಜಾಧವ ಅವರ ಬಳಿ 4 ನಿವೇಶನ, ಎರಡು ಮನೆ, 7 ಎಕರೆ ಕೃಷಿ ಜಮೀನು ಸೇರಿ ₹2.37 ಕೋಟಿ ಮೌಲ್ಯದ ಸ್ಥಿರ ಆಸ್ತಿ ಹಾಗೂ ₹1.50 ಲಕ್ಷ ನಗದು, ₹18 ಲಕ್ಷ ಮೌಲ್ಯದ ಚಿನ್ನಾಭರಣ, ₹15.50 ಲಕ್ಷ ಮೌಲ್ಯದ ವಾಹನಗಳು, ₹50 ಲಕ್ಷ ಪುತ್ರನ ವೈದ್ಯಕೀಯ ಸೀಟಿನ ಶುಲ್ಕ, ₹36.46 ಲಕ್ಷ ಮೌಲ್ಯದ ಷೇರು ಮತ್ತು ಬಾಂಡ್ ಸೇರಿ ₹1.21 ಕೋಟಿ ಮೌಲ್ಯದ ಚರ ಆಸ್ತಿ ಒಳಗೊಂಡು ಒಟ್ಟು ₹3.58 ಕೋಟಿ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ; ₹48 ಕೋಟಿ ಮೌಲ್ಯದ ಆಸ್ತಿ ಪತ್ತೆ