ಬಳ್ಳಾರಿ/ಬೆಳಗಾವಿ: ಬಳ್ಳಾರಿ ಮತ್ತು ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧೆಡೆ ಮಧ್ಯರಾತ್ರಿ ಆರ್‌ಟಿಒ ಚೆಕ್ ಪೋಸ್ಟ್ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಈ ದಿಢೀರ್ ದಾಳಿ ನಡೆಸಿದ್ದು, ಪರಿಶೀಲನೆ ಮುಂದುವರೆಸಿದ್ದಾರೆ.
ಬಳ್ಳಾರಿ ತಾಲೂಕಿನ ಪಿಡಿ ಹಳ್ಳಿ ಸಮೀಪದ ಆರ್‌ಟಿಒ ಚೆಕ್ ಪೋಸ್ಟ್ ಮೇಲೆ ಮಧ್ಯಾರಾತ್ರಿ 2 ಗಂಟೆಗೆ ದಾಳಿ ನಡೆಸಿದ ಎಸ್ಪಿ ಸಿದ್ದರಾಜು ನೇತೃತ್ವದ ಲೋಕಾಯುಕ್ತ ತಂಡ ಪರಿಶೀಲನೆ ನಡೆಸುತ್ತಿದೆ. ಡಿವೈಎಸ್ಪಿ ವಸಂತಕುಮಾರ್, ರಫೀಕ್, ಸಂಗಮೇಶ್ ಸೇರಿದಂತೆ ಇತರ ಅಧಿಕಾರಿಗಳು ಚೆಕ್ ಪೋಸ್ಟ್ನಲ್ಲಿದ್ದ ಹೆಚ್ಚುವರಿ ಹಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಮತ್ತೊಂದೆಡೆ ಲೋಕಾಯುಕ್ತ ಎಸ್‌ಪಿ ಹನುಮಂತರಾಯ ಅವರ ನೇತೃತ್ವದ ಲೋಕಾಯುಕ್ತ ಸಿಬ್ಬಂದಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4 ಬಳಿಯ ಚೆಕ್ ಪೋಸ್ಟ್ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ. ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಅಧಿಕಾರಿಗಳು ಲಾರಿ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಸುಮಾರು ಆರು ಜನ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.
ಇದನ್ನೂ ಓದಿ: ಅಬಕಾರಿ ಕಚೇರಿಗಳ ಮೇಲೆ ಲೋಕಾ ದಾಳಿ: ಕಚೇರಿಯಲ್ಲಿ ಸಿಕ್ತು ಗಾಂಜಾ, ಮದ್ಯದ ಬಾಟಲಿಗಳು - Lokayukta raid on Excise Department