ಹಾವೇರಿ: ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಹಿರೇಕೆರೂರು ಉಪವಿಭಾಗದ ಸಹಾಯಕ ಎಂಜಿನಿಯರ್ (ಎಇ) ಕಾಶಿನಾಥ್ ಭಜಂತ್ರಿ ತಮ್ಮ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಕಿಟಕಿಯಿಂದ ಹೊರಗೆಸೆದ ಪ್ರಸಂಗ ನಡೆದಿದೆ.
ಇಂದು ಬೆಳಗ್ಗೆ ಹಾವೇರಿ ನಗರದ ಬಸವೇಶ್ವರ ನಗರದ 1ನೇ ಕ್ರಾಸ್ನಲ್ಲಿರುವ ಕಾಶಿನಾಥ್ ಭಜಂತ್ರಿ ನಿವಾಸಕ್ಕೆ ಲೋಕಾಯುಕ್ತ ಪೊಲೀಸರು ಆಗಮಿಸಿದ್ದರು. ಈ ವೇಳೆ ಕಾಶಿನಾಥ್ ಭಜಂತ್ರಿ 9 ಲಕ್ಷ ರೂಪಾಯಿ ಹಣವನ್ನು ಗಂಟು ಕಟ್ಟಿ ಕಿಟಕಿ ಮೂಲಕ ಹೊರಗೆ ಎಸೆದಿದ್ದಾರೆ. ಅಷ್ಟೇ ಅಲ್ಲದೇ, 2 ಲಕ್ಷ ರೂಪಾಯಿ ನಗದನ್ನು ಹಾಸಿಗೆಯಲ್ಲಿ ಸುತ್ತಿ ಇಟ್ಟಿದ್ದರು. ಮನೆಯಲ್ಲಿದ್ದ 14 ಲಕ್ಷ ರೂಪಾಯಿ ನಗದು ಹಣವನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಸೇರಿ ದೇಶಾದ್ಯಂತ ಎನ್ಐಎ ಕಾರ್ಯಾಚರಣೆ; ಅಲ್-ಖೈದಾ ಬೆಂಬಲಿಗರ ನೆಲೆಗಳ ಮೇಲೆ ದಾಳಿ
ಹಾಗೆಯೇ ನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಶ್ರೀನಿವಾಸ್ ಆಲದರ್ತಿ ಅವರ ನಿವಾಸದ ಮೇಲೂ ದಾಳಿ ಮಾಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ರಾಣೆಬೆನ್ನೂರು ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿಯಾಗಿ ಕೆಲಸ ಮಾಡುತ್ತಿರುವ ಜ್ಯೋತಿ ಶಿಗ್ಲಿ ಅವರ ಮನೆ ಮೇಲೂ ಲೋಕಾ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೃತ್ಯುಂಜಯ ನಗರದ ನಿವಾಸಕ್ಕೆ ತೆರಳಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ರಾಜ್ಯದ ಹಲವೆಡೆ ಲೋಕಾ ಶಾಕ್: ಇನ್ನು ದಾವಣಗೆರೆ, ಧಾರವಾಡ, ಬೆಳಗಾವಿ, ಬೀದರ್ ಸೇರಿ ರಾಜ್ಯದ ಹಲವೆಡೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಹಾಯ ನಿರ್ದೇಶಕ ಕಮಲ್ ರಾಜ್ ಅವರ ದಾವಣಗೆರೆ ಮನೆ ಮೇಲೆ, ಕೆಐಎಡಿಬಿ ಎಇಇ ಗೋವಿಂದಪ್ಪ ಭಜಂತ್ರಿ ಅವರಿಗೆ ಸಂಬಂಧಪಟ್ಟ ಆರು ಕಡೆಗಳಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಧಾರವಾಡದಲ್ಲಿ ಮೂರು, ಸವದತ್ತಿ ತಾಲೂಕಿನಲ್ಲಿ ಎರಡು ಹಾಗೂ ನರಗುಂದದಲ್ಲಿ ಒಂದು ಕಡೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೀದರ್ ಜಿಲ್ಲಾ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ರವೀಂದ್ರ ಕುಮಾರ್ ರೊಟ್ಟಿ ಅವರ ನಿವಾಸ ಹಾಗೂ ಕಚೇರಿಯ ಮೇಲೆ ಲೋಕಾಯುಕ್ತ ಡಿವೈಎಸ್ಪಿ ಹನುಮಂತ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಇದನ್ನೂ ಓದಿ: ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ, ದಾಖಲೆಗಳ ಪರಿಶೀಲನೆ