ಬೆಂಗಳೂರು : ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಲೋಕಾಯುಕ್ತ ನ್ಯಾ. ಬಿ. ಎಸ್. ಪಾಟೀಲ್ ಹಾಗೂ ಇಬ್ಬರು ಉಪಲೋಕಾಯುಕ್ತರು ಒಳಗೊಂಡಂತೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಪರಿಶೀಲಿಸಿತು.
ಸಾರ್ವಜನಿಕರಿಂದ ಹೆಚ್ಚಿನ ಸಂಖ್ಯೆಯಲ್ಲಿ ದೂರು ಬಂದಿದ್ದರಿಂದ ಆಸ್ಪತ್ರೆಯಲ್ಲಿ ಕುಂದುಕೊರತೆ ಬಗ್ಗೆ ತಿಳಿಯಲು ಖುದ್ದು ಲೋಕಾಯುಕ್ತರು ಸ್ಥಳಕ್ಕೆ ಭೇಟಿ ನೀಡಿದರು. ಆಸ್ಪತ್ರೆಯ ಪ್ರತಿಯೊಂದು ವಿಭಾಗಕ್ಕೆ ತೆರಳಿ ರೋಗಿಗಳ ಕುಂದುಕೊರತೆಯನ್ನ ಆಲಿಸಿದರು. ರೋಗಗಳಿಗೆ ಅನುಸಾರವಾಗಿ ಔಷಧವಿಲ್ಲದಿರುವುದು, ವಾರ್ಡ್ಗಳಲ್ಲಿ ವೈದ್ಯರು ಇಲ್ಲದಿರುವುದು ಒಳಗೊಂಡಂತೆ ಹಲವು ನ್ಯೂನತೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಪರಿಶೀಲನೆ ಬಳಿಕ ಮಾತನಾಡಿದ ನ್ಯಾ. ಬಿ ಎಸ್ ಪಾಟೀಲ್, ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ದೊರಕುತ್ತಿಲ್ಲ ಎಂಬ ದೂರು ಬಂದ ಹಿನ್ನೆಲೆ ಇಂದು ಸರ್ಪ್ರೈಸ್ ವಿಸಿಟ್ ಮಾಡಿದ್ದೇವೆ. ಪರಿಶೀಲನೆ ವೇಳೆ ಔಷಧ ಕೊಟ್ಟ ಬಗ್ಗೆ ರಿಜಿಸ್ಟರ್ನಲ್ಲಿ ಎಂಟ್ರಿಯಾಗಿಲ್ಲ. ಮೂವರು ಡೇಟಾ ಎಂಟ್ರಿ ಆಪರೇಟರ್ ನೇಮಕ ಮಾಡಿಕೊಂಡಿದ್ದಾರೆ. ಜೀವ ಉಳಿಸುವ ತುರ್ತು ಔಷಧಗಳಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಔಷಧ ವಿತರಿಸುವ ಗುತ್ತಿಗೆದಾರರಿಗೆ ಹಣ ಬಾಕಿ ಇರುವುದರಿಂದ ಔಷಧ ಸರಬರಾಜಿಗೆ ತಡೆಯಾಗಿದೆ ಎಂದಿದ್ದಾರೆ.
ಒಪಿಡಿಯಲ್ಲಿ ಎಲ್ಲಾ ವೈದ್ಯರು ಇರಲಿಲ್ಲ, ಕಿರಿಯ ವೈದ್ಯರಿದ್ದರು. ಈ ಸಂಬಂಧ ಕೆಲ ಸೂಪರಿಂಟೆಂಡೆಂಟ್ ಬಂದರೆ ಇನ್ನೂ ಕೆಲವರು ರಜೆಯಲ್ಲಿದ್ದಾರೆ ಅಂದಿದ್ದಾರೆ. ರೋಗಿಗಳಿಗೆ ಸರಿಯಾಗಿ ಮಾರ್ಗದರ್ಶನ ನೀಡದಿರುವುದು ಕಂಡುಬಂದಿದೆ. ಹಲವು ನ್ಯೂನತೆಗಳು ಕಂಡು ಬಂದಿದ್ದು, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ : ಧಾರವಾಡ ಜಿಲ್ಲಾಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿ ದಿಢೀರ್ ಭೇಟಿ.. ರೋಗಿಗಳ ಆರೋಗ್ಯ ವಿಚಾರಣೆ