ಕೋಲಾರ: ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕೋಲಾರ ಕಾಂಗ್ರೆಸ್ನಲ್ಲಿದ್ದ ಎರಡು ಗುಂಪುಗಳ ನಡುವಿನ ಪ್ರತಿಷ್ಠೆ, ಬಣ ರಾಜಕೀಯ ತಾರಕಕ್ಕೇರಿತ್ತು. ಬಣ ರಾಜಕೀಯ ಶಮನ ಮಾಡಲು ಹೈಕಮಾಂಡ್ ಕೊನೆಗೂ ಎರಡೂ ಬಣಗಳನ್ನು ಹೊರತು ಪಡಿಸಿ ಮೂರನೇ ಅಭ್ಯರ್ಥಿಗೆ ಮಣೆ ಹಾಕಿದೆ. ಇಲ್ಲಿ ಸಚಿವ ಕೆಎಚ್ ಮುನಿಯಪ್ಪಗೆ ತೀವ್ರ ಹಿನ್ನಡೆಯಾಗಿದ್ದು, ಅಳಿಯ ಚಿಕ್ಕ ಪೆದ್ದಣ್ಣಗೆ ಟಿಕೆಟ್ ಕೈ ತಪ್ಪಿದೆ.
ಕೋಲಾರ ಬಣ ರಾಜಕೀಯಕ್ಕೆ ಟಕ್ಕರ್ ಕೊಟ್ಟಿರುವ ಕಾಂಗ್ರೆಸ್ ಹೈ ಕಮಾಂಡ್ ಅಚ್ಚರಿ ಅಭ್ಯರ್ಥಿಯಾಗಿ ಬೆಂಗಳೂರು ಮೂಲದ ಗೌತಮ್ ಹೆಸರು ಘೋಷಣೆ ಮಾಡಿದೆ. ಕೊನೆಗೂ ಮೇಲುಗೈ ಸಾಧಿಸಿದ ರಮೇಶ್ ಕುಮಾರ್ ಬಣದ ಒತ್ತಾಯಕ್ಕೆ ಮಣೆ ಹಾಕಿರುವ ಕಾಂಗ್ರೆಸ್ ಹೈ ಕಮಾಂಡ್ 7 ಬಾರಿ ಸಂಸದರಾಗಿ, 2 ಬಾರಿ ಕೇಂದ್ರ ಸಚಿವರಾಗಿ, ಸದ್ಯ ಆಹಾರ ಸಚಿವರಾಗಿರುವ ಮುನಿಯಪ್ಪ ಅವರ ಬೇಡಿಕೆ ಮನ್ನಿಸಿಲ್ಲ. ಈ ಮೂಲಕ ಕಾಂಗ್ರೆಸ್ ಹೈಕಮಾಂಡ್ನಲ್ಲಿ ತಮ್ಮ ಪ್ರಭಾವ ಹೊಂದಿದ್ದ ಮುನಿಯಪ್ಪಗೆ ದೊಡ್ಡ ಹಿನ್ನಡೆ ಇದಾಗಿದೆ.
ಈಗಾಗಲೆ ಕಾಂಗ್ರೆಸ್‌ನ ಹಲವು ನಾಯಕರು ಕುಟುಂಬಕ್ಕೆ ಟಿಕೆಟ್ ಕೊಡಿಸಿದ್ದಾರೆ. ಅದರಂತೆ ತನ್ನ ಅಳಿಯ ಚಿಕ್ಕ ಪೆದ್ದಣ್ಣಗೆ ಟಿಕೆಟ್ ಕೊಡಿಸಲು ಮುನಿಯಪ್ಪ ಪ್ಲಾನ್ ಮಾಡಿದ್ರು. ಆದರೆ, ಕೆಹೆಚ್ ಮುನಿಯಪ್ಪ ಇದರಲ್ಲಿ ಸಕ್ಸಸ್ ಆಗಿಲ್ಲ. ರೆಬಲ್ ಶಾಸಕರ ಒತ್ತಡಕ್ಕೆ ಮಣಿದ ಹೈ ಕಮಾಂಡ್ 2 ಬಣಗಳನ್ನು ಮನವೊಲಿಸುವ ಬದಲಾಗಿ ಮೂರನೆಯವರಿಗೆ ಮಣೆ ಹಾಕಿದೆ.
ಶಾಸಕರು ಜವಾಬ್ದಾರಿ ವಹಿಸಿಕೊಂಡರೆ ಮಾತ್ರ ಎದುರಾಳಿಗೆ ಪ್ರಬಲ ಪೈಪೋಟಿ ನೀಡಬಹುದಾಗಿದೆ. ಹಲವಾರು ಸವಾಲುಗಳನ್ನು ಗೌತಮ್ ಎದುರಿಸಲೇಬೇಕಾದ ಅನಿವಾರ್ಯತೆ ಇದೆ.
ಇನ್ನೂ ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದ ಜೆಡಿಎಸ್ ಸಹ ತನ್ನ ಮೈತ್ರಿ ಅಭ್ಯರ್ಥಿ ಘೋಷಣೆ ಮಾಡಿದೆ. ಜೆಡಿಎಸ್ನಿಂದ ಮಲ್ಲೇಶ್ ಬಾಬು ಅವರನ್ನು ಕಣಕ್ಕೆ ಇಳಿಸಿದರೆ, ಕಾಂಗ್ರೆಸ್ನಿಂದ ಅಚ್ಚರಿ ಅಭ್ಯರ್ಥಿಯಾಗಿ ಗೌತಮ್ ಕಣದಲ್ಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬುಗೆ ಲೋಕಲ್ ಟ್ರಂಪ್ ನೆರವಾಗಬಹುದು.
ಮಲ್ಲೇಶ್ ಬಾಬು ಕೋಲಾರ ಕ್ಷೇತ್ರದಲ್ಲಿ ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಬಂಗಾರಪೇಟೆಯಿಂದ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು. ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 3 ಕ್ಷೇತ್ರಗಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಇನ್ನು ಇವರಿಗೆ ಮೈನಸ್ ಅಂದ್ರೆ ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿ, ಮೈತ್ರಿ ಸಮನ್ವಯ ಕೊರತೆ ಎದುರಾದರೆ ಕಷ್ಟ. ಮಲ್ಲೇಶ್ ಬಾಬು ಎದುರು ಕಾಂಗ್ರೆಸ್ ಅಭ್ಯರ್ಥಿ, ಹೊಸ ನಾಯಕರೊಂದಿಗೆ ಹೊಸ ಮತದಾರರ ಬಳಿ ಹೇಗೆ ಮತ ಕೇಳ್ತಾರೆ, ಹೇಗೆ ಗೆಲ್ತಾರೆ ಅನ್ನೋದು ನಿಜಕ್ಕೂ ಕುತೂಹಲಕಾರಿಯಾಗಿದೆ.