ಬೆಂಗಳೂರು: ರಾಜ್ಯದಲ್ಲಿ ಇಂದು ನಡೆದ ಎರಡನೇ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ ಶೇ. 70.03 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ಮತ್ತು ರಾಜ್ಯ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ನಡುವೆ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಂಜೆ 7 ಗಂಟೆಗೆ ಶೇ.74.39 ರಷ್ಟು ಮತದಾನವಾಗಿತ್ತು.
ಇನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಸ್ಪರ್ಧಿಸಿರುವ ಕಲಬುರಗಿ ಕ್ಷೇತ್ರದಲ್ಲಿ ಕೇವಲ ಶೇ 61.73ರಷ್ಟು ಮತದಾನವಾಗಿದ್ದು, ರಾಜ್ಯದಲ್ಲಿ ಇದುವರೆಗಿನ ಅತ್ಯಂತ ಕಡಿಮೆ ಮತದಾನವಾಗಿದೆ. ಬಿಜೆಪಿಯ ಹಾಲಿ ಸಂಸದ ಉಮೇಶ್ ಜಾಧವ್ ವಿರುದ್ಧ ರಾಧಾಕೃಷ್ಣ ದೊಡ್ಡಮನಿ ಸ್ಪರ್ಧೆ ಮಾಡಿದ್ದಾರೆ.
ಮತ್ತೊಂದು ಕಡೆ ಶಿವಮೊಗ್ಗಲ್ಲಿ ಮಾಜಿ ಸಿಎಂ ಬಿಎಸ್ವೈ ಪುತ್ರ ಬಿವೈ ರಾಘವೇಂದ್ರ ವಿರುದ್ಧ ಇನ್ನೊಬ್ಬ ಮಾಜಿ ಸಿಎಂ ದಿ. ಎಸ್ ಬಂಗಾರಪ್ಪ ಪುತ್ರಿ ಗೀತಾ ಶಿವರಾಜಕುಮಾರ್ ಸ್ಪರ್ಧಿಸಿದ್ದಾರೆ. ಈ ನಡುವೆ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ಇವರಿಬ್ಬರಿಗೆ ಪೈಪೋಟಿ ನೀಡುತ್ತಿದ್ದಾರೆ. ಹೈ-ಪ್ರೊಫೈಲ್ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ.76.05 ರಷ್ಟು ಗರಿಷ್ಠ ಮತದಾನವಾಗಿದೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಸ್ಪರ್ಧಿಸಿದ್ದು, ಇಲ್ಲಿ 68.70 ರಷ್ಟು ಮತದಾನವಾಗಿದೆ. ಬಿಜೆಪಿ ಅಭ್ಯರ್ಥಿಗಳಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಸ್ಪರ್ಧಿಸಿರುವ ಹಾವೇರಿ ಮತ್ತು ಬೆಳಗಾವಿ ಕ್ಷೇತ್ರಗಳಲ್ಲಿ ಶೇ.72.59 ಮತ್ತು ಶೇ.70.36ರಷ್ಟು ಹಕ್ಕು ಚಲಾವಣೆ ಆಗಿದೆ.
ಶಹಾಪುರ ವಿಧಾನಸಭೆ ಉಪ ಚುನಾವಣೆ: ಇನ್ನು ಯಾದಗಿರಿ ಶಹಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯೂ ಏಕಕಾಲದಲ್ಲಿ ನಡೆದಿದ್ದು, ಇಲ್ಲಿ ಶೇ.66.72ರಷ್ಟು ಮತದಾನವಾಗಿದೆ. ಬಿಜೆಪಿ ತನ್ನ ಅಭ್ಯರ್ಥಿಯಾಗಿ ರಾಜೂಗೌಡ (ನರಸಿಂಹ ನಾಯಕ್)ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜಾ ವೇಣುಗೋಪಾಲ್ ನಾಯಕ್ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ್ ನಿಧನದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯುತ್ತಿದೆ.
ಕ್ಷೇತ್ರವಾರು ಮತದಾನದ ಮಾಹಿತಿ ಹೀಗಿದೆ:
- ಬಾಗಲಕೋಟೆ - ಶೇ. 70.47
- ದಾವಣಗೆರೆ - ಶೇ. 76.23
- ಶಿವಮೊಗ್ಗ - ಶೇ. 76.05
- ಹಾವೇರಿ - ಶೇ. 72.59
- ಧಾರವಾಡ - ಶೇ. 68.70
- ಬಳ್ಳಾರಿ - ಶೇ. 69.48
- ರಾಯಚೂರು - ಶೇ. 60.72
- ಕೊಪ್ಪಳ - ಶೇ. 67.83
- ಬೀದರ್ - ಶೇ. 63.65
- ವಿಜಯಪುರ - ಶೇ. 64.71
- ಕಲಬುರಗಿ - ಶೇ. 61.73
- ಬೆಳಗಾವಿ- ಶೇ. 70.36
- ಚಿಕ್ಕೋಡಿ - ಶೇ. 74.39
- ಉತ್ತರ ಕನ್ನಡ- ಶೇ. 73.52