ಬೆಳಗಾವಿ/ಬೆಂಗಳೂರು: 16 ವರ್ಷದ ಬಾಲಕನ ಯಕೃತ್ (ಲಿವರ್) ಅನ್ನು ಬೆಳಗಾವಿಯಿಂದ ಕೇವಲ ಮೂರು ಗಂಟೆಯಲ್ಲಿ ಬೆಂಗಳೂರಿಗೆ ರವಾನಿಸಿ, 63 ವರ್ಷದ ರೋಗಿಗೆ ಯಶಸ್ವಿಯಾಗಿ ಕಸಿ ಮಾಡುವಲ್ಲಿ ಯಶವಂತಪುರದಲ್ಲಿರುವ ಸ್ಪರ್ಶ ಆಸ್ಪತ್ರೆ ಯಶಸ್ವಿಯಾಗಿದೆ.
ಬೆಳಗಾವಿಯಲ್ಲಿ ಮಂಗಳವಾರ ರಾತ್ರಿ ಬಾಲಕ ಮೃತಪಟ್ಟಿದ್ದರಿಂದ ಆತನ ಯಕೃತ್ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು. ಇದರಿಂದಾಗಿ ಬೆಂಗಳೂರಲ್ಲಿ ಕಳೆದೊಂದು ವರ್ಷದಿಂದ ಯಕೃತ್ತಿಗಾಗಿ ಕಾಯುತ್ತಿದ್ದ ರೋಗಿಗೆ ಆ ಲಿವರ್ ಯಶಸ್ವಿಯಾಗಿ ಜೋಡಣೆ ಮಾಡಲಾಗಿದೆ. ಈ ಮೂಲಕ ಮಗನ ಸಾವಿನ ನೋವಿನಲ್ಲೂ ಬಾಲಕನ ಪೋಷಕರು ಶ್ರೇಷ್ಠತೆ ಸಾರಿದ್ದಾರೆ.
ಬೆಂಗಳೂರು ಸ್ಪರ್ಶ ಆಸ್ಪತ್ರೆಯ ವೈದ್ಯಕೀಯ ತಂಡ, ಕರ್ನಾಟಕ ರಾಜ್ಯ ಅಂಗಾಂಗ ಮತ್ತು ಜೀವಕೋಶ ಕಸಿ ಪ್ರಾಧಿಕಾರ ʼಜೀವನ ಸಾರ್ಥಕತೆʼ ಮತ್ತು ಇಂಡಿಗೋ ಏರ್‌ಲೈನ್ಸ್‌ನ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಪೊಲೀಸರು, ಸಂಚಾರಿ ಪೊಲೀಸರ ನೆರವಿನೊಂದಿಗೆ ಗ್ರೀನ್ ಕಾರಿಡಾರ್ (ಝೀರೋ ಟ್ರಾಫಿಕ್ ) ಮೂಲಕ ಯಕೃತ್‌ನ್ನು ಯಾವುದೇ ಅಡೆತಡೆಯಿಲ್ಲದೇ ಶರವೇಗದಂತೆ ಬೆಂಗಳೂರಿಗೆ ತಂದು ತಕ್ಷಣವೇ ಕಸಿ ಮಾಡಿ ಜೀವವೊಂದನ್ನು ಉಳಿಸಿದೆ.
ಕಳೆದ ರಾತ್ರಿ ನಿಧನ ಹೊಂದಿದ್ದ ಬೆಳಗಾವಿ ಬಾಲಕ: ಮಂಗಳವಾರ ರಾತ್ರಿ ನಿಧನ ಹೊಂದಿದ್ದ 16 ವರ್ಷದ ಬೆಳಗಾವಿಯ ಬಾಲಕನ ಕುಟುಂಬ ಯಕೃತ್ ದಾನ ಮಾಡುವ ಅತ್ಯಂತ ಶ್ರೇಷ್ಠ ನಿರ್ಧಾರವನ್ನು ಕೈಗೊಂಡಿತ್ತು. ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದ ಬಾಲಕನ ದೇಹದಿಂದ ಯಕೃತ್‌ನ್ನು ಬೇರ್ಪಡಿಸಿ ತಕ್ಷಣ ಝೀರೋ ಟ್ರಾಫಿಕ್ ಮೂಲಕ ಒಂದು ಗಂಟೆಯೊಳಗೆ ಹುಬ್ಬಳ್ಳಿಗೆ ತಲುಪಿಸಲಾಯಿತು. ಅಲ್ಲಿ ಸಿದ್ಧವಾಗಿ ನಿಂತಿದ್ದ ಇಂಡಿಗೋ ಏರ್‌ಲೈನ್ಸ್ ವಿಮಾನ ಮೂಲಕ ಪ್ರಯಾಣಿಕರ ಆಸನದಲ್ಲೇ ಬಾಲಕನ ಯಕೃತ್‌ನ ಶೀತಲೀಕೃತ ಬಾಕ್ಸ್ನಲ್ಲಿ ಇರಿಸಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಬೆ.9.35ಕ್ಕೆ ವಿಮಾನ ಭೂ ಸ್ಪರ್ಶ ಮಾಡುತ್ತಿದ್ದಂತೆ ಧಾವಿಸಿ ಬಂದ ಆಂಬುಲೆನ್ಸ್ ಮತ್ತು ವೈದ್ಯಕೀಯ ತಂಡ ಯಕೃತ್‌ನ್ನು ಯಶವಂತಪುರದ ಸ್ಪರ್ಶ ಆಸ್ಪತ್ರೆಗೆ ಝೀರೋ ಟ್ರಾಫಿಕ್ ಮೂಲಕ ತಲುಪಿಸಿತು.
ಸಂಕೀರ್ಣ ಪರಿಸ್ಥಿತಿಗಳಲ್ಲಿ ತಂಡದ ವ್ಯವಸ್ಥಿತ ಸಹಕಾರದ ಮಹತ್ವದ ಕುರಿತು ಶ್ಲಾಘನೆ ವ್ಯಕ್ತಪಡಿಸಿದ ಸ್ಪರ್ಶ ಆಸ್ಪತ್ರೆ ಸಮೂಹದ ಅಧ್ಯಕ್ಷ ಡಾ.ಶರಣ್ ಶಿವರಾಜ್ ಪಾಟೀಲ್, “ಈ ಸಾಧನೆಯು ಪರಿಣಾಮಾತ್ಮಕವಾದ ಪ್ರಯತ್ನದ ಫಲಶೃತಿಯನ್ನು ಎತ್ತಿ ತೋರಿಸುತ್ತದೆ. ನಿಧನ ಹೊಂದಿದ ಬಾಲಕನ ಕುಟುಂಬದ ಸರ್ವೋತ್ಕೃಷ್ಟ ನಿರ್ಧಾರದಿಂದ ಒಂದು ಜೀವ ಉಳಿದಿದೆ. ಅಂಗಾಂಗ ಕಸಿ ಪ್ರಾಧಿಕಾರ, ಪೊಲೀಸ್ ಇಲಾಖೆ, ಇಂಡಿಗೋ ಏರ್‌ಲೈನ್ಸ್ ಸೇರಿದಂತೆ ಪ್ರತಿಯೊಬ್ಬರ ಸಮನ್ವಯ ಸಹಕಾರದಿಂದ ಇದು ಸಾಧ್ಯವಾಗಿದೆ. ಯಕೃತ್ ಕಸಿಯಲ್ಲಿ ಸ್ಪರ್ಶ ಆಸ್ಪತ್ರೆ ಸಮೂಹ ಮಂಚೂಣಿಯಲ್ಲಿರುವುದಕ್ಕೆ, ತಮ್ಮ ಮರುಜೀವ ಮತ್ತು ಮರುಜೀವನದ ನಿರೀಕ್ಷೆಯಲ್ಲಿರುವ ರೋಗಿಗಳಿಗೆ ಆಶಾಕಿರಣವಾಗಿರುವುದಕ್ಕೆ ನಮಗೆ ಹೆಮ್ಮೆಯೆನಿಸುತ್ತದೆ” ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ಮೆಟ್ಟಿಲಿನಿಂದ ಬಿದ್ದು ಸಾವು, ಅಂಗಾಂಗ ದಾನ