ದಾವಣಗೆರೆ: ನಗರದ ಖಾಸಗಿ ಹೋಟೆಲ್ನಲ್ಲಿ ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ ವಿರುದ್ಧ ಮತ್ತೆ ಭಕ್ತರು ಸಭೆ ನಡೆಸಿ ಗಂಭೀರ ಆರೋಪ ಮಾಡಿದ್ದಾರೆ.
ಭಾನುವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಸಮಾಜದ ಮುಖಂಡ ಅಣಬೇರು ರಾಜಣ್ಣ, "ಹಿರಿಯ ಗುರುಗಳು ಸಮಾಜಕ್ಕೆ ಸಾಕಷ್ಟು ಮಾಡಿದ್ದಾರೆ. ಶಿಕ್ಷಣದ ಕ್ರಾಂತಿ ಮಾಡಿದ್ದಾರೆ, ಅದರೆ ಇಂದಿನ ಗುರುಗಳಿಗೆ ಏಕೆ ಈರೀತಿಯ ಬುದ್ಧಿ ಬಂದಿದೆ ಎಂದು ನಮಗೆ, ಭಕ್ತರಿಗೆ ದಿಗ್ಭ್ರಮೆ ಆಗಿದೆ. ಹಿರಿಯ ಸ್ವಾಮೀಜಿ ಅವರು ಬೈಲ ಮಾಡಿಟ್ಟು ಹೋಗಿದ್ದಾರೆ. ಅದರೆ ಇಂದಿನ ಸ್ವಾಮೀಜಿ ಅವರು ಅದನ್ನು ಬದಲಾವಣೆ ಮಾಡಿ ಟ್ರಸ್ಟ್ ಮಾಡಿಕೊಂಡು, ಇಡೀ ಮಠದ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
''ಜಗದ್ಗುರು ಆದವರಿಗೆ ಹಣ, ಆಸ್ತಿ ಆಸೆ ಇರಬಾರದು. ಅವರು ಅನ್ನದಾಸೋಹ, ಅಕ್ಷರ ದಾಸೋಹ ಮಾಡಬೇಕು. ಎರಡು ಸಾವಿರ ಕೋಟಿ ಹಣ, ಆಸ್ತಿ ತಮ್ಮ ಹೆಸರಿಗೆ ಮಾಡಿಕೊಂಡು ಸ್ವಾಮೀಜಿ ಸಾಧು ಲಿಂಗಾಯತ ಸಮಾಜಕ್ಕೆ ಮೋಸ ಮಾಡಿದ್ದಾರೆ. ಟ್ರಸ್ಟ್ ಮಾಡಿ 30 ವರ್ಷಗಳಿಂದ ರಹಸ್ಯವಾಗಿಡುವಂತಹ ಅವಶ್ಯಕತೆ ಏನಿತ್ತು. ಟ್ರಸ್ಟ್ ಮಾಡಿಕೊಂಡಿದ್ದು, ಇದೀಗ ಬಯಲಿಗೆ ಬಂದಿದೆ. ಅದೆನೇ ಇರಲಿ ಮುಂದಿನ ಸ್ವಾಮೀಜಿ ಯಾರು ಹೇಳಿ'' ಎಂದು ಪ್ರಶ್ನಿಸಿದರು.
''ಸಮಾಜ ಮುಖಂಡರು, ಶ್ರೀ ಅವರು ಸೇರಿಕೊಂಡು ಮುಂದಿನ ಪೀಠಾಧಿಪತಿಯನ್ನು ಆಯ್ಕೆ ಮಾಡಬೇಕೆಂದು ಬೈಲಾದಲ್ಲಿದೆ. ನಾವು ರೆಸಾರ್ಟ್ನಲ್ಲಿ ಸಭೆ ಮಾಡಿದ್ರೆ ಕುಡುಕರ ಸಭೆ ಎಂದಿದ್ದಾರೆ. ನಾವು ಕುಡುಕರು ಆದರೆ ನೀವು ಹಾಲು ಕುಡಿದವರು ಚೆನ್ನಾಗಿ ಮಾತಾಡಿ. ಉತ್ತರಾಧಿಕಾರಿ ನೇಮಕ ಅಧಿಕಾರ ಸ್ವಾಮೀಜಿ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾಮೀಜಿಗೆ ಕೈಮುಗಿದು ಕೇಳುವೆ ಸಮಾಜ ಒಡೆಯ ಬೇಡಿ: ಸಭೆಯ ಬಳಿಕ ಮಾಜಿ ಸಚಿವ ಬಿ. ಸಿ. ಪಾಟೀಲ್ ಮಾತನಾಡಿ, "ಸ್ವಾಮೀಜಿಗೆ ಕೈಮುಗಿದು ಕೇಳುವೆ ಸಮಾಜ ಒಡೆಯಬೇಡಿ. ಸಭೆಯಲ್ಲಿ ಸಮಾಜದ ಆಗುಹೋಗುಗಳ ಕುರಿತ ಚರ್ಚೆ ಆಗಿದೆ. ನಮ್ಮ ಶಿವಮೂರ್ತಿ ಸ್ವಾಮೀಜಿಗಳು ಸಮಾಜಕ್ಕೆ ಉತ್ತಮ ಕೆಲಸ ಮಾಡಿದ್ದಾರೆ. ಕಳೆದ ಸಭೆಯಲ್ಲಿ ಶಾಮನೂರು ಶಿವಶಂಕ್ರಪ್ಪ ಅವರ ನೇತೃತ್ವದಲ್ಲಿ ಸಭೆ ಮಾಡಲಾಗಿತ್ತು. ಸ್ವಾಮೀಜಿ, 5ನೇ ತಾರೀಖು ಅಪೂರ್ವ ರೆಸಾರ್ಟ್ ನಲ್ಲಿ ನಡೆದ ಸಭೆ ಕುಡುಕರ ಸಭೆ, ನಾವು ಹಾಲು ಕುಡಿಯುವವರು ಅಂತ ತಮ್ಮ ಭುಜವನ್ನು ತಾವೇ ತಟ್ಟಿಕೊಂಡಿದ್ದಾರೆ'' ಎಂದರು.
ಸಭೆಯಲ್ಲಿ ಎಸ್. ಎ. ರವೀಂದ್ರನಾಥ್, ಮಾಜಿ ಶಾಸಕ ವಡ್ನಾಳ್ ರಾಜಣ್ಣ ಸೇರಿ ಪ್ರಮುಖರು ಇದ್ದರು.
ಇದನ್ನೂ ಓದಿ: ಐದು ಸಾವಿರ ಹಾವುಗಳ ರಕ್ಷಕ: ಸೂರಿಗಾಗಿ ಸರ್ಕಾರಕ್ಕೆ ಮೊರೆಯಿಟ್ಟ ಬಡಪಾಯಿ ಉರಗಪ್ರೇಮಿ - Davangere Snake Basavaraj