ಚಿಕ್ಕಮಗಳೂರು: ಮಲೆನಾಡಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಭೀಕರ ಗಾಳಿಗೆ ನೂರಾರು ವಿದ್ಯುತ್ ಕಂಬಗಳು ಧರೆಗುರುಳಿವೆ. ಇದರಿಂದಾಗಿ ಅನೇಕ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದೇ ಕತ್ತಲಲ್ಲಿ ಜನರು ಕಾಲ ಕಳೆಯುವಂತಾಗಿದೆ. ವಿದ್ಯುತ್ ಇಲಾಖೆ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿರುವ ಸಾರ್ವಜನಿಕರು, ಇದೀಗ ಲೈನ್ಮ್ಯಾನ್ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಿರುವ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ತಂತಿ ಮೇಲೆ ಮರ ಬಿದ್ದು, 3 ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹುಯಿಗೆರೆ ಗ್ರಾಮದಲ್ಲಿ ಜನರು ಕತ್ತಲಲ್ಲಿ ಕಾಲ ಕಳೆಯುವಂತಾಗಿತ್ತು. ಲೈನ್ಮ್ಯಾನ್ ರವಿಕುಮಾರ್ ಎನ್ನುವವರು, ಸೊಂಟಕ್ಕೆ ತಂತಿಯನ್ನು ಕಟ್ಟಿಕೊಂಡು, ಅಪಾಯಮಟ್ಟದಲ್ಲಿ ಹರಿಯುತ್ತಿದ್ದ ಹಳ್ಳದಲ್ಲಿ ಈಜಿ ಹೋಗಿ, ಒಂದು ದಡದಿಂದ ಇನ್ನೊಂದು ದಡಕ್ಕೆ ತಲುಪಿ ಹಳ್ಳಿಗಳಿಗೆ ಬೆಳಕು ತರುವ ಮಾಡುವ ಕೆಲಸವನ್ನು ಮಾಡಿದ್ದಾರೆ. ಲೈನ್ಮ್ಯಾನ್ ರವಿ ಅವರ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರವಿ ಅವರು ಈಜಿ ತಂತಿ ಕೊಂಡೊಯ್ಯುತ್ತಿರುವ ವಿಡಿಯೋವನ್ನು ಸ್ಥಳೀಯರೇ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರಹಿಡಿದಿದ್ದಾರೆ. ಇಲಾಖೆ ಒಂದೊಂದೇ ಕಡೆ ವಿದ್ಯುತ್ ಸಂಪರ್ಕ ದುರಸ್ಥಿ ಕೆಲಸವನ್ನು ಮಾಡಿಕೊಂಡು ಬರುತ್ತಿದೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಧಾರಾಕಾರ ಮಳೆ: ಧರೆಗುರುಳಿದ ಮರ, ವಿದ್ಯುತ್ ಕಂಬಗಳು - TREES FELL ON CAR