ಬೆಂಗಳೂರು: ''ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಲೇವಾದೇವಿದಾರರ ಕಿರುಕುಳದಿಂದ ಸಾಲಗಾರರ ಹಿತ ಕಾಪಾಡಲು ಶೀಘ್ರದಲ್ಲೇ ಕಾನೂನು ರೂಪಿಸಲಾಗುವುದು'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗೃಹಕಚೇರಿ ಕೃಷ್ಣಾದಲ್ಲಿ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ''ಮೈಕ್ರೋ ಫೈನಾನ್ಸ್ಗಳಿಂದ ಸಾಲ ಪಡೆಯುವವರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ. ಸಾಲಗಾರರಿಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆದಷ್ಟು ಬೇಗನೆ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ಜಾರಿ ಮಾಡಲಾಗುವುದು'' ಎಂದು ಭರವಸೆ ನೀಡಿದರು.
''ಬಲವಂತದ ಸಾಲ ವಸೂಲಾತಿ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ, ಈ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಸಾಧ್ಯವಾಗುವಂತೆ ಕಾನೂನಿನಲ್ಲಿ ಅವಕಾಶ ಇರಲಿದೆ. ಈಗಿರುವ ಕಾನೂನು ಇನ್ನಷ್ಟು ಬಲಪಡಿಸಲು ಕ್ರಮವಹಿಸಲಾಗುತ್ತದೆ. ಇದರಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲಾಗುತ್ತದೆ. ನೋಂದಣಿಯಾಗದ ಲೇವಾದೇವಿಗಾರರ ಮೇಲೆ ನಿಯಂತ್ರಣಕ್ಕೆ ಹೊಸ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗುವುದು'' ಎಂದರು.
ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳಿಂದ ಸಭೆ: ''ಆರ್ಬಿಐ ಅಧಿಕಾರಿಗಳು, ನಬಾರ್ಡ್ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಮೈಕ್ರೋ ಫೈನಾನ್ಸ್ ಸಂಘದವರಿಂದ ಹಾಗೂ ಆರ್ಬಿಐ ಪ್ರತಿನಿಧಿಗಳಿಂದ ಅಭಿಪ್ರಾಯ ಕೇಳಿದ್ದೇನೆ. ಅವರ ಅಭಿಪ್ರಾಯ ಕೇಳಿದ ಮೇಲೆ ಯಾರೂ ಕೂಡ ಸಾಲ ಕೊಡಬೇಡಿ, ವಸೂಲು ಮಾಡಬೇಡಿ ಅಂತ ಹೇಳಲ್ಲ. ಆದರೆ, ವಸೂಲು ಮಾಡುವಾಗ ಕಿರುಕುಳ ನೀಡಬಾರದು, ವಸೂಲಿ ಮಾಡುವಾಗ ಆರ್ಬಿಐ ನಿಯಮ ಪಾಲಿಸಲು ಸೂಚನೆ ನೀಡಿದ್ದೇನೆ. ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಭೆ ನಡೆಸಿ ಈ ಕುರಿತ ಜನರಿಗೆ ಸೂಕ್ತ ತಿಳಿವಳಿಕೆ ಹಾಗೂ ಮೈಕ್ರೋ ಫೈನಾನ್ಸ್ನವರಿಗೆ ಎಚ್ಚರಿಕೆ ನೀಡಬೇಕು'' ಎಂದು ತಿಳಿಸಿದರು.
ಬೇರೆ ರಾಜ್ಯಗಳಲ್ಲಿನ ಕಾನೂನು ಪರಿಶೀಲನೆ: ''ಕಾನೂನು ಮೀರಿ ಬಡ್ಡಿ ಮೊತ್ತ ಕೇಳಬಾರದು. ಸಂಜೆ 5 ಗಂಟೆ ಬಳಿಕ ಸಾಲ ವಸೂಲಿ ಮಾಡಬಾರದು. ಹೊರಗುತ್ತಿಗೆ ಮೂಲಕ ವಸೂಲಿ ಮಾಡಬಾರದು ಎಂದು ಸೂಚನೆ ನೀಡಿದ್ದೇನೆ. ಆ ಮೂಲಕ ರೌಡಿಗಳ ಬಳಕೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಮನಿ ಲ್ಯಾಂಡ್ರಿಗ್ ಕಾನೂನಿಗೆ ಕೂಡಲೇ ತಿದ್ದುಪಡಿ ಮಾಡುತ್ತೇವೆ. ಅದರ ಜೊತೆಗೆ ಕೂಡಲೇ ಹೊಸ ಕಾನೂನು ರೂಪಿಸುತ್ತೇವೆ. ಸಾಲಗಾರರ ಹಿತರಕ್ಷಣೆಗಾಗಿ ಈ ಕಾನೂನು ತರುತ್ತಿದ್ದೇವೆ. ಬೇರೆ ರಾಜ್ಯಗಳಲ್ಲಿನ ಕಾನೂನುಗಳನ್ನು ಪರಿಶೀಲಿಸಲಿದ್ದೇವೆ. ಆಂಧ್ರದಲ್ಲಿನ ಕಾನೂನು ನೋಡಿ, ಕೂಡಲೇ ಕಠಿಣ ಕಾನೂನು ರಚಿಸಿ ಆ ಸಂಬಂಧ ಸುಗ್ರೀವಾಜ್ಞೆ ಹೊರಡಿಸುತ್ತೇವೆ'' ಎಂದರು.
ಡಿಸಿ ಕಚೇರಿಯಲ್ಲಿ ಸಹಾಯವಾಣಿ: ''ಈ ಬಗ್ಗೆ ಪ್ರತಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಒಂದು ಸಹಾಯವಾಣಿ ತೆರೆಯಲಾಗುವುದು. ಅಲ್ಲಿಗೆ ದೂರು ಕೊಡಬಹುದಾಗಿದೆ. ದೂರಿನ ಮೇಲೆ ಅಥವಾ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡಲಾಗುತ್ತದೆ. ಗೂಂಡಾಗಳನ್ನು ಬಳಸಿ, ಹೆದರಿಸಿ ಬೆದರಿಸಿ ಸಾಲ ವಸೂಲಿ ಮಾಡುವ ಪ್ರಕರಣ ಸಂಬಂಧ ಕಾನೂನು ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇವೆ'' ಎಂದು ಮಾಹಿತಿ ನೀಡಿದರು.
ಕೇಂದ್ರಕ್ಕೆ ಪತ್ರ ಬರೆಯಲಾಗುವುದು: ''ಕಿರುಕುಳ ತಪ್ಪಿಸಲು ಕಾನೂನು ಮಾಡುವಂತೆ ಕೇಂದ್ರ ಸರ್ಕಾರಕ್ಕೂ ಕೂಡ ಒತ್ತಾಯ ಮಾಡುತ್ತೇವೆ. ಏಕೆಂದರೆ ಆರ್ಬಿಐಯಡಿ ಮೈಕ್ರೋ ಫೈನಾನ್ಸ್ಗಳು ಬರುತ್ತವೆ. Banning of unregulated lending Activities ಕುರಿತು ಕೇಂದ್ರ ಸರ್ಕಾರ ಕರಡು ಸಿದ್ಧಪಡಿಸಿದೆ. ಈ ಕುರಿತು ಸಮಗ್ರ ಸಮಾಲೋಚನೆ ನಡೆಸಿ, ಸಾಲದ ಸುಳಿಯಲ್ಲಿ ಸಿಲುಕಿರುವವರ ಹಿತ ಕಾಪಾಡಲು ಕ್ರಮ ಕೈಗೊಳ್ಳಬೇಕು. ಕಿರುಕುಳ ತಪ್ಪಿಸಲು ಸೂಕ್ತ ಕಾನೂನು ರಚಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು'' ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ: ಹಾವೇರಿಯಲ್ಲಿ ಕಿರಾಣಿ ಅಂಗಡಿ ಮಾಲೀಕ ಆತ್ಮಹತ್ಯೆ: ಮೈಕ್ರೋ ಫೈನಾನ್ಸ್ ಕಿರುಕುಳ ಆರೋಪ
''ಕೆಲ ಮೈಕ್ರೋ ಫೈನಾನ್ಸ್ ಸಂಸ್ಥೆಗಳು 29%, 28% ಬಡ್ಡಿ ವಸೂಲಿ ಮಾಡುತ್ತಿದೆ. 20,000 ರೂ. ಮಾತ್ರ ಸಾಲ ಕೊಡಲು ಅವಕಾಶ ಇದೆ. ಆದರೆ, ಮೈಕ್ರೋ ಫೈನಾನ್ಸ್ಗಳು 17.07% ಬಡ್ಡಿ ವಿಧಿಸಲು ಆರ್ಬಿಐ ನಿಯಮ ಇದೆ. ಅದನ್ನು ಮೀರಿ ಬಡ್ಡಿ ಹಾಕಲಾಗುತ್ತಿದೆ. ಇದನ್ನು ನಿಯಂತ್ರಿಸಲು ಹೊಸ ಕಾನೂನು ತರಲಾಗುವುದು. ಆರ್ಬಿಐ ಮೈಕ್ರೋ ಫೈನಾನ್ಸ್ ಅನ್ನು ನಿಯಂತ್ರಣ ಮಾಡದೇ ಇದ್ದರೆ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಲಿದೆ ಎಂದಿದ್ದೇವೆ'' ಎಂದು ಹೇಳಿದರು.
''ಮೈಕ್ರೋ ಫೈನಾನ್ಸ್ ಸಂಸ್ಥೆಗಳಲ್ಲಿ ಸುಮಾರು 59,367.76 ಕೋಟಿ ರೂ.ಗೂ ಹೆಚ್ಚು ಸಾಲ ವಸೂಲಿ ಬಾಕಿ ಇದೆ ಎಂದು ಮಾಹಿತಿ ನೀಡಿದ್ದಾರೆ. 1,09,88,332 ಸಾಲ ನೀಡಿದ ಖಾತೆಗಳಿವೆ. ರಾಜ್ಯದಲ್ಲಿ ಸುಮಾರು 3,090 ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಾಗೂ ಬ್ರಾಂಚ್ಗಳು ಇವೆ. ನೋಂದಣಿಯಾಗಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು 31 ಇವೆ. ಆದರೆ ಅನಧಿಕೃತ ಮೈಕ್ರೋ ಫೈನಾನ್ಸ್ ಸಂಸ್ಥೆಗಳೇ ಹೆಚ್ಚಿವೆ. ಈಗಾಗಲೇ 7 ಪ್ರಕರಣಗಳು ದಾಖಲಾಗಿವೆ. ಕೂಡಲೇ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ. ಕಿರುಕುಳದಿಂದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ'' ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ಗಳಿಗೆ ಸಿಎಂ ಖಡಕ್ ಎಚ್ಚರಿಕೆ: ಸಾಲಗಾರರ ಮೇಲೆ ದಬ್ಬಾಳಿಕೆ ಸಹಿಸಲ್ಲ ಎಂದ ಸಿದ್ದರಾಮಯ್ಯ