ಬೆಂಗಳೂರು: ರಾಜ್ಯದಲ್ಲಿ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಮರಳಿದೆ. ಕಳೆದ ಬಾರಿ ಎರಡಂಕಿ ದಾಟಿದ್ದ ಉಡುಪಿ ಹಾಗೂ ದಕ್ಷಿಣ ಕನ್ನಡ ಈ ಬಾರಿ ಮೊದಲೆರಡು ಸ್ಥಾನ ಅಲಂಕರಿಸಿದ್ದರೆ, ಕಳೆದ ಬಾರಿಯ ಟಾಪರ್ ಚಿತ್ರದುರ್ಗ ಈ ಸಲ 21ನೇ ಸ್ಥಾನಕ್ಕೆ ಜಾರಿದೆ.
ಆದರೆ, ವಿದ್ಯಾಕಾಶಿ ಧಾರವಾಡದ ಸ್ಥಾನದಲ್ಲಿ ಅಷ್ಟೇನು ಬದಲಾವಣೆ ಆಗಿಲ್ಲ. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ 28 ರಿಂದ ಮೂರನೇ ಸ್ಥಾನಕ್ಕೆ ಏರಿಕೆ. ಯಾದಗಿರಿ ಮಾತ್ರ ಕಳೆದ ಬಾರಿಯಂತೆ ಈ ಸಲವೂ ಕಡೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ನಿರೀಕ್ಷೆಯಂತೆ ಉಡುಪಿ ಜಿಲ್ಲೆ ಮೊದಲ ಸ್ಥಾನ ಪಡೆದುಕೊಂಡಿದೆ. ಕಳೆದ ಬಾರಿ 14ನೇ ಸ್ಥಾನದಲ್ಲಿದ್ದ ಕೃಷ್ಣನೂರು ಉಡುಪಿ, ಈ ಸಲ ರಾಜ್ಯದ ಟಾಪರ್ ಜಿಲ್ಲೆಯಾಗಿದೆ. ಕಳೆದ ಬಾರಿ 17ನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಈ ಬಾರಿ ಎರಡನೇ ಸ್ಥಾನಕ್ಕೆ ಏರಿದೆ. 28ನೇ ಸ್ಥಾನದಲ್ಲಿದ್ದ ಶಿವಮೊಗ್ಗ ಈ ಬಾರಿ 3ನೇ ಸ್ಥಾನಕ್ಕೆ ಜಿಗಿದಿದ್ದು, ಉತ್ತಮ ಸಾಧನೆ ತೋರಿದೆ. ಕಳೆದ ಬಾರಿ 8 ನೇ ಸ್ಥಾನದಲ್ಲಿದ್ದ ಕೊಡಗು ಈ ಬಾರಿ 4 ಸ್ಥಾನ ಬಡ್ತಿ ಪಡೆದು 4ನೇ ಸ್ಥಾನಕ್ಕೇರಿದೆ. ಕಳೆದ ಬಾರಿ 12ನೇ ಸ್ಥಾನದಲ್ಲಿದ್ದ ಉತ್ತರ ಕನ್ನಡ ಈ ಬಾರಿ 5ನೇ ಸ್ಥಾನ ತಲುಪಿದೆ.
ಕಳೆದ ಸಲ 3ನೇ ಸ್ಥಾನದಲ್ಲಿದ್ದ ಹಾಸನ ಈ ಬಾರಿ ಮೂರು ಸ್ಥಾನ ಕುಸಿತ ಕಂಡಿದ್ದು, 6ನೇ ಸ್ಥಾನ ಪಡೆದುಕೊಂಡಿದೆ. 19ನೇ ಸ್ಥಾನದಲ್ಲಿದ್ದ ಸಾಂಸ್ಕೃತಿಕ ನಗರಿ ಮೈಸೂರು ಈ ಬಾರಿ ಏಳನೇ ಸ್ಥಾನ ಗಳಿಸಿ ಉತ್ತಮ ಸಾಧನೆ ಮಾಡಿದೆ. 23ನೇ ಸ್ಥಾನದಲ್ಲಿದ್ದ ಶೈಕ್ಷಣಿಕ ಜಿಲ್ಲೆ ಸಿರಸಿ ಈ ಬಾರಿ 8ನೇ ಸ್ಥಾನ ಪಡೆದುಕೊಂಡಿದೆ.
ಟಾಪ್ 4 ಆಗಿದ್ದ ಬೆಂಗಳೂರು ಗ್ರಾಮಾಂತರ ಈ ಬಾರಿ ಐದು ಸ್ಥಾನ ಕುಸಿತ ಕಂಡಿದ್ದು, 9ನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ. 18ನೇ ಸ್ಥಾನದಲ್ಲಿದ್ದ ಕಾಫಿನಾಡು ಚಿಕ್ಕಮಗಳೂರು 10ನೇ ಸ್ಥಾನ ಪಡೆದಿದೆ. ಕಳೆದ ಬಾರಿ 11ನೇ ಸ್ಥಾನದಲ್ಲಿದ್ದ ವಿಜಯಪುರ ಜಿಲ್ಲೆಯ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಈ ಬಾರಿಯೂ 11 ನೇ ಸ್ಥಾನದಲ್ಲಿಯೇ ಮುಂದುವರೆದಿದೆ.
ಶೈಕ್ಷಣಿಕ ರಂಗದಲ್ಲಿ ಹೆಸರು ಮಾಡಿರುವ ಬೆಂಗಳೂರು ದಕ್ಷಿಣ ಜಿಲ್ಲೆ ಕಳೆದ ಬಾರಿ 33ನೇ ಸ್ಥಾನಕ್ಕೆ ಜಾರಿತ್ತಾದರೂ ಈ ಬಾರಿ 12ನೇ ಸ್ಥಾನಕ್ಕೆ ಬಂದಿದೆ. ಕಳೆದ ಬಾರಿ 27ನೇ ಸ್ಥಾನದಲ್ಲಿದ್ದ ಬಾಗಲಕೋಟೆ ಈ ಬಾರಿ 13ನೇ ಸ್ಥಾನಕ್ಕೆ ಬರುವ ಮೂಲಕ ಅಚ್ಚರಿ ಬೆಳವಣಿಗೆ ದಾಖಲಿಸಿದೆ. ಬೆಂಗಳೂರು ಉತ್ತರ 32ನೇ ಸ್ಥಾನದಿಂದ 14ನೇ ಸ್ಥಾನಕ್ಕೆ ಜಿಗಿದಿದೆ. 22ನೇ ಸ್ಥಾನದಲ್ಲಿದ್ದ ಹಾವೇರಿ 15ನೇ ಸ್ಥಾನ ಪಡೆದುಕೊಂಡಿದೆ. 20ನೇ ಸ್ಥಾನದಲ್ಲಿದ್ದ ತುಮಕೂರು ಈ ಬಾರಿ 16ನೇ ಸ್ಥಾನಕ್ಕೇರಿದೆ. 25ನೇ ಸ್ಥಾನದಲ್ಲಿದ್ದ ಗದಗ 17ನೇ ಸ್ಥಾನಕ್ಕೆ ಬಂದಿದೆ.
ಕಳೆದ ಬಾರಿ 5ನೇ ಟಾಪರ್ ಆಗಿದ್ದ ಚಿಕ್ಕಬಳ್ಳಾಪುರ ಈ ಬಾರಿ 18 ನೇ ಸ್ಥಾನಕ್ಕಿಳಿದು ದೊಡ್ಡಮಟ್ಟದ ಕುಸಿತ ಕಂಡಿದೆ. ಟಾಪ್ 2 ಆಗಿದ್ದ ಮಂಡ್ಯವೂ ಕೂಡ 19ನೇ ಸ್ಥಾನ ಪಡೆದು ದಾಖಲೆಯ ಇಳಿಕೆ ಕಂಡಿದೆ. 6ನೇ ಸ್ಥಾನದಲ್ಲಿದ್ದ ಕೋಲಾರ 20ನೇ ಸ್ಥಾನಕ್ಕೆ ಜಾರಿದೆ. ರಾಜ್ಯಕ್ಕೆ ಟಾಪರ್ ಆಗಿದ್ದ ಚಿತ್ರದುರ್ಗ ನಂಬರ್ ಒನ್ ಸ್ಥಾನದಿಂದ 21ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಕಳೆದ ಬಾರಿ 24ನೇ ಸ್ಥಾನದಲ್ಲಿದ್ದ ವಿದ್ಯಾಕಾಶಿ ಧಾರವಾಡ 22ನೇ ಸ್ಥಾನಕ್ಕೆ ಬಂದಿದೆ. ಬೆಣ್ಣೆನಗರಿ ದಾವಣಗೆರೆ 15ನೇ ಸ್ಥಾನದಿಂದ 23ನೇ ಸ್ಥಾನಕ್ಕೆ ಇಳಿದಿದೆ. ಏಳನೇ ಸ್ಥಾನದಲ್ಲಿದ್ದ ಚಾಮರಾಜನಗರ 24ನೇ ಸ್ಥಾನಕ್ಕೆ ಬಂದು ನಿಂತಿದೆ. 13ನೇ ಸ್ಥಾನದಲ್ಲಿದ್ದ ಚಿಕ್ಕೋಡಿ ಈ ಬಾರಿ 25ನೇ ಸ್ಥಾನಕ್ಕೆ ತಲುಪಿದೆ. 21ನೇ ಸ್ಥಾನದಲ್ಲಿದ್ದ ರಾಮನಗರ 26ನೇ ಸ್ಥಾನಕ್ಕೆ ಜಾರಿದೆ. ಟಾಪ್ 10 ಆಗಿದ್ದ ವಿಜಯನಗರ ಈ ಬಾರಿ 27ನೇ ಸ್ಥಾನಕ್ಕೆ ಕುಸಿದಿದೆ. ಗಣಿನಾಡು ಬಳ್ಳಾರಿ 31ನೇ ಸ್ಥಾನದಿಂದ 28ನೇ ಸ್ಥಾನಕ್ಕೆ ಬಂದು ಅಲ್ಪ ಉತ್ತಮ ಫಲಿತಾಂಶ ತೋರಿದೆ.
ಇದನ್ನೂ ಓದಿ: ಎಸ್ಎಸ್ಎಲ್ಸಿ ಫಲಿತಾಂಶ: ಶಿರಸಿಯ ನಾಲ್ವರು ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ದ್ವಿತೀಯ, ತೃತೀಯ ಸ್ಥಾನ - SSLC TOPPERS
ಕಳೆದ ಬಾರಿ 26ನೇ ಸ್ಥಾನದಲ್ಲಿದ್ದ ಬೆಳಗಾವಿ ಈ ಬಾರಿ 29ನೇ ಸ್ಥಾನಕ್ಕೆ ಜಾರಿದೆ. 9ನೇ ಸ್ಥಾನದಲ್ಲಿದ್ದ ಶೈಕ್ಷಣಿಕ ಜಿಲ್ಲೆ ಮಧುಗಿರಿ 30ನೇ ಸ್ಥಾನಕ್ಕೆ ಕುಸಿದಿದೆ. 30ನೇ ಸ್ಥಾನದಲ್ಲಿದ್ದ ರಾಯಚೂರು 31ನೇ ಸ್ಥಾನಕ್ಕೆ ಬಂದಿದೆ. 16ನೇ ಸ್ಥಾನದಲ್ಲಿದ್ದ ಕೊಪ್ಪಳ 32ನೇ ಸ್ಥಾನಕ್ಕಿಳಿದಿದೆ. 34ನೇ ಸ್ಥಾನದಲ್ಲಿದ್ದ ಬೀದರ್ 33ನೇ ಸ್ಥಾನ ಪಡೆದುಕೊಂಡಿದ್ದರೆ, 29ನೇ ಸ್ಥಾನದಲ್ಲಿದ್ದ ಕಲಬುರಗಿ 34ನೇ ಸ್ಥಾನ ಪಡೆದಿದೆ. ಕಡೆಯದಾಗಿ 35ನೇ ಸ್ಥಾನದಲ್ಲಿದ್ದ ಯಾದಗಿರಿ ಈ ಬಾರಿಯೂ ಕಡೆಯ 35ನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ.
ಕಳೆದ ಬಾರಿಯ ಟಾಪ್ 5 ಜಿಲ್ಲೆಗಳ ಇಂದಿನ ಸ್ಥಾನ:
ಕಳೆದ ಬಾರಿಯ ಟಾಪರ್ ಚಿತ್ರದುರ್ಗ ಈ ಬಾರಿ 21ನೇ ಸ್ಥಾನ
ಟಾಪ್ 2 ಜಿಲ್ಲೆ ಮಂಡ್ಯ ಈ ಬಾರಿ 19ನೇ ಸ್ಥಾನ
ಟಾಪ್ 3 ಜಿಲ್ಲೆ ಹಾಸನ ಈ ಬಾರಿ 6ನೇ ಸ್ಥಾನ
ಟಾಪ್ 4 ಜಿಲ್ಲೆ ಬೆಂಗಳೂರು ಗ್ರಾಮಾಂತರ ಈ ಬಾರಿ 9ನೇ ಸ್ಥಾನ
ಟಾಪ್ 5 ಜಿಲ್ಲೆ ಚಿಕ್ಕಬಳ್ಳಾಪುರ ಈ ಬಾರಿ 18ನೇ ಸ್ಥಾನ
ಇದನ್ನೂ ಓದಿ: ಎಸ್ಎಸ್ಎಲ್ಸಿ ಫಲಿತಾಂಶ: ರೈತನ ಮಗಳು ರಾಜ್ಯಕ್ಕೆ ಫಸ್ಟ್, IAS ಅಧಿಕಾರಿಯಾಗುವ ಕನಸು - SSLC Topper