ವಿಜಯಪುರ: ಜಿಲ್ಲೆಯ ಕತ್ನಳ್ಳಿಯ ಶ್ರೀ ಗುರು ಚಕ್ರವರ್ತಿಯ ಸದಾಶಿವ ಮುತ್ಯಾನ ಜಾತ್ರೆ ಪ್ರತಿ ವರ್ಷದಂತೆ ಈ ವರ್ಷ ಕೂಡ ವಿಜೃಂಭಣೆಯಿಂದ ನಡೆಯಿತು. ಜಾತ್ರೆಯ ಪ್ರಯುಕ್ತ ಸಾಮೂಹಿಕ ಮದುವೆಗಳನ್ನು ಮಾಡಲಾಗುತ್ತದೆ. ಇಲ್ಲಿನ ವಿಶೇಷತೆ ಎಂದರೆ ಕಾಲಜ್ಞಾನ ನುಡಿಯುವುದು. ಇಲ್ಲಿ ನುಡಿದ ಕಾಲಜ್ಞಾನ ಆಧರಿಸಿಯೇ ತಮ್ಮ ಯೋಜನೆಗಳನ್ನು ಭಕ್ತಾಧಿಗಳು ರೂಪಿಸುತ್ತಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಯುಗಾದಿಯ ವೇಳೆ ಸದಾಶಿವ ಮುತ್ಯಾನ ಜಾತ್ರೆ ನಡೆಯಿತು. ವಿಜಯಪುರ ತಾಲೂಕಿನ ಸುಕ್ಷೇತ್ರ ಕತಕನಹಳ್ಳಿಯಲ್ಲಿ ಶ್ರೀಗುರು ಚಕ್ರವರ್ತಿ ಸದಾಶಿವ ಮುತ್ಯಾ ನೆಲೆಸಿದ್ದಾನೆ. ಈ ಪವಾಡ ಪುರುಷನ ಜಾತ್ರೆಯನ್ನು ಪ್ರತಿವರ್ಷ ಯುಗಾದಿಯ ವೇಳೆ ಒಂದು ವಾರದವರೆಗೆ ನಡೆಸಲಾಗುತ್ತದೆ. ಈ ವೇಳೆ ಇಲ್ಲಿನ ಪೀಠಾಧಿಪತಿಗಳಾದ ಶಿವಯ್ಯ ಮಹಾಸ್ವಾಮೀಜಿಗಳು ಮುಂದಿನ ವರ್ಷದ ಭವಿಷ್ಯ ನುಡಿಯುತ್ತಾರೆ.
ಈ ಬಾರಿ ನುಡಿದ ಭವಿಷ್ಯ ಜನಸಾಮಾನ್ಯರನ್ನು ಹಿಡಿದು ರಾಜಕೀಯದವರೆಗೂ ಹುಚ್ಚು ಹಿಡಿಸುವಂತಾಗಿದೆ. ಯಾಕಂದ್ರೆ ಇಲ್ಲಿ ನುಡಿದಿದ್ದ ಭವಿಷ್ಯ ಎಂದೂ ಸುಳ್ಳಾಗಿಲ್ಲ ಎಂಬುದು ಅಷ್ಟೇ ನಂಬಿಕೆಯಾಗಿದೆ. ಈ ಬಾರಿ ನುಡಿದಿರುವ ಭವಿಷ್ಯದಲ್ಲಿ ಕ್ರೋಧಿನಾಮ ಸಂವತ್ಸರ ಇರೋದ್ರಿಂದ ಸಿಟ್ಟು ಮಾಡಿಕೊಳ್ಳಬೇಡಿ, ರಾವಣನ ಹಾಗೇ ಇರಬೇಡಿ, ಸಿಟ್ಟು ಒಳ್ಳೆಯದಲ್ಲ ಎಲ್ಲವನ್ನು ಶಾಂತ ರೀತಿಯಿಂದ ನಿಭಾಯಿಸಿ. ಈ ವರ್ಷ ಸಮ್ಮಿಶ್ರಣ ಇದೆ. ಸುಖ ದುಃಖ, ಶಾಂತಿ ಅಶಾಂತಿ, ಆರೋಗ್ಯ ಅನಾರೋಗ್ಯ ಎಲ್ಲವೂ ಇದೆ. ಸೆರೆಮನೆ ಕಾಲ ಇದೆ, ಶಿವ ಮಳೆಗಾಗಿ ಒಂಟಿ ಕಾಲಲ್ಲಿ ನಿಂತಿದ್ದಾನೆ. ಇನ್ನೂ ಈ ಹಿಂದೆ ನೀರಿಗಾಗಿ ಯುದ್ಧ ಆಗತ್ತೆ ಅಂತಾ ಹೇಳಿದ್ದೆ - ಬೇಸಿಗೆ ಬೇರೆ ಬರುತ್ತೆ, ಯಾರನ್ನ ಕೂಡಸ್ತದೋ, ಯಾರನ್ನ ಅಗಲಸ್ತದೋ ಗೊತ್ತಿಲ್ಲ ಎಂದರು.
ಇನ್ನೂ ರಾಜಕೀಯ ಭವಿಷ್ಯದ ವಿಚಾರವಾಗಿ ನುಡಿದ ಅಜ್ಜ, ನಾಲ್ಕು ರೇಸಿನ ಗಾಡಿಗಳಿವೆ. ತ್ಯಾಗಿ, ಯೋಗಿ, ಭೋಗಿ, ರೋಗಿ - ಯಾವ ಗಾಡಿಯಲ್ಲಿ ಕೂತು ರೇಸ್ ಗೆಲ್ತಿರೋ ನೀವೆ ನೋಡಿ ಅಂತ ಭಕ್ತರ ವಿವೇಚನೆಗೆ ಬಿಟ್ಟಿದ್ದಾರೆ. ಒಳಗೆ ದೈತ್ಯ ಕಂಪನಿ ಇದೆ, ದೈತ್ಯರೆ ರಾಜಕೀಯ ಮಾಡಬೇಕು ಎಂದಿದೆ. ಮಿಕ್ಸ್ ಬಾಜಿ ಮಾಡೋಕೆ ನಿಂತಿದೆ ಎಂದು ಇಂಡಿಯಾ ಅಲೈನ್ಸ್ ಬಗ್ಗೆ ಪರೋಕ್ಷವಾಗಿ ಶ್ರೀಗಳು ಮಾತನಾಡಿದ್ರು ಅನ್ನುವಂತಿತ್ತು. ಅಮೃತ ಘಳಿಗೆ ಇದೆ, ಜಯ ಅಪಜಯ, ಸುಖಕ್ಕಿಂತ ದುಃಖ ಹೆಚ್ಚಿದೆ. ವಿರಸ ಬೇಡ, ಸರಸ ಇರಲಿ, ಬೆಳ್ಳಗಿರೋದು ಹಾಲಲ್ಲ, ಬೆಳ್ಳಗಿರೋದನ್ನ ನಂಬಬೇಡಿ ಎಂದ ಶ್ರೀಗಳು ಹೇಳಿದರು.
ಈ ಹಿಂದೆ ಕಾಡಿನ ಪ್ರಾಣಿ ನಾಡಲ್ಲಿ, ನಾಡಿನ ಪ್ರಾಣಿ ಕಾಡಲ್ಲಿ ಎಂದು ಹೇಳಿದ್ದೆ. ಅದು ಆಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಪಂಚಭೂತಗಳ ಮೇಲೆ ನಿಗಾ ಇಡಿ. ಮಳೆಯ ವಿಚಾರವಾಗಿ ಹೇಳಿದ ಅಜ್ಜ, ಮಳೆಗಾಗಿ ಶಿವ ಒಂಟಿಗಾಲಲ್ಲಿ ನಿಂತಿದ್ದಾನೆ. ಅಂದ್ರೆ ಶಿವನು ಕೂಡಾ ಮಳೆಗಾಗಿ ಕಾಯುತ್ತಿದ್ದಾನೆ ಎಂದು ಕಾರ್ಣಿಕ ನುಡಿದರು.
ಪವಾಡ ಪುರುಷ ಶ್ರೀಗುರು ಚಕ್ರವರ್ತಿಯ ದೇವಸ್ಥಾನದ ಪಕ್ಕದಲ್ಲೇ ಹಜರತ್ ಮಹೆಬೂಬ್ ಸುಭಾನಿ ದರ್ಗಾ ಕೂಡ ಇದೆ. ಹೀಗಾಗಿಯೇ ದೇವಸ್ಥಾನಕ್ಕೆ ಬಂದವರು ಈ ದರ್ಗಾಕ್ಕೂ ಹೋಗ್ತಾರೆ. ಅಲ್ಲದೇ ಇಲ್ಲಿ ಹಿಂದೂ - ಮುಸ್ಲಿಂ ಎಂಬ ಭೇದಭಾವ ಇಲ್ಲದೇ ಸರ್ವಧರ್ಮಗಳ ಭಕ್ತರು ಇಲ್ಲಿಗೆ ಆಗಮಿಸಿ ದರ್ಶನ ಪಡೆಯುತ್ತಾರೆ.
ಸದಾಶಿವನ ಜಾತ್ರೆಯ ವೇಳೆ ಪುರಾಣ, ದೀಪೋತ್ಸವ, ರಥೋತ್ಸವ, ಕುಂಭಮೇಳ, ಸಾಮೂಹಿಕ ವಿವಾಹ, ಅನ್ನದಾಸೋಹ, ಜ್ಞಾನದೀಪೋತ್ಸವ, ಕೆಸರು ಗದ್ದೆ ಓಟ, ಮಠದ ಇತಿಹಾದ ಕುರಿತಾದ ಗ್ರಂಥಗಳ ಲೋಕಾರ್ಪಣೆ ಸೇರಿದಂತೆ ಹಲವು ಆಚರಣೆಗಳು ನಡೆದವು. ಒಟ್ಟಿನಲ್ಲಿ ಈ ಜಾತ್ರೆಗೆ ಬೇರೆ ಬೇರೆ ಜಿಲ್ಲೆಗಳಿಂದ ಬರುವ ಲಕ್ಷಾಂತರ ಭಕ್ತರು ಕಾಲಜ್ಞಾನದ ಹೇಳಿಕೆಯಿಂದಲೇ ತಮ್ಮ ಬೆಳೆಗಳನ್ನು ಬೆಳೆಯುವುದು ಸಾಮಾನ್ಯವಾಗಿರುವುದು ಗಮನಾರ್ಹ..
ಓದಿ: ಅರಮನೆ ನಗರಿಯಲ್ಲೊಂದು 'ಹಸಿರು ಮನೆ'; 190 ಬಗೆಯ ಗಿಡ, ಬಳ್ಳಿಗಳಿಂದ ಮೈದಳೆದ ವನಸಿರಿ - Green House