ಬೆಂಗಳೂರು/ನವದೆಹಲಿ: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇಂದು ಬೆಳಗ್ಗೆ ಕರ್ನಾಟಕ ಮತ್ತು ತಮಿಳುನಾಡು ಸೇರಿ 16 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ. ಕರ್ನಾಟಕದ ಬೆಂಗಳೂರು ನಗರ, ಕೊಡಗು ಜಿಲ್ಲೆ, ಕೇರಳದ ಎರ್ನಾಕುಲಂ ಮತ್ತು ತಮಿಳುನಾಡಿನ ಚೆನ್ನೈ ಸೇರಿದಂತೆ 16 ಕಡೆ ದಾಳಿ ದಾಳಿ ನಡೆಸಲಾಗಿದೆ.
ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರು ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಎನ್‌ಐಎ ಈ ದಾಳಿ ನಡೆಸಿದೆ ಎಂದು ಮೂಲಗಳು ಬಹಿರಂಗಪಡಿಸಿವೆ. ಆರೋಪಿಗಳು ವಿದೇಶಗಳಲ್ಲಿ ನೆಲೆಸಿದ್ದು, ಅಲ್ಲಿಂದ ಅವರು ತಮ್ಮ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ ಎಂದು ಎನ್ಐಎ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಆರೋಪಿ ಹಂತಕರು ದಕ್ಷಿಣ ಭಾರತದ ವಿವಿಧ ನಗರಗಳ ಸ್ಥಳೀಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂಬುದು ದೃಢಪಟ್ಟಿದೆ. ಈ ನಿಟ್ಟಿನಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಎನ್‌ಐಎ, ಶಂಕಿತ ಹಂತಕರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಶಂಕಿತ ವ್ಯಕ್ತಿಗಳ ನಿವಾಸ ಮತ್ತು ಆಸ್ತಿಗಳ ಮೇಲೆ ದಾಳಿ ನಡೆಸುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಜುಲೈ 26, 2022 ರಂದು ರಾತ್ರಿ ದ್ವಿಚಕ್ರವಾಹನದಲ್ಲಿ ಬಂದ ದುಷ್ಕರ್ಮಿಗಳು ಕೊಂದು ಹಾಕಿದ್ದರು. ಯುವಕನೊಬ್ಬನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ದುಷ್ಕರ್ಮಿಗಳು ಪ್ರವೀಣ್‌ನನ್ನು ಗುರಿಯಾಗಿಸಿಕೊಂಡು ಕೊಲೆ ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ. ಪ್ರಕರಣದ ತನಿಖೆಗೆ ಆರಂಭದಲ್ಲಿ ಪೊಲೀಸ್ ಇಲಾಖೆ ವಿಶೇಷ ತಂಡಗಳನ್ನು ರಚಿಸಿತ್ತು. ಬಳಿಕ ತನಿಖೆಯನ್ನು ಎನ್ಐಎಗೆ ವಹಿಸಲಾಗಿತ್ತು.
ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ 20 ಆರೋಪಿಗಳ ವಿರುದ್ಧ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿತ್ತು. 14 ಮಂದಿಯನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಆರು ಮಂದಿಗಾಗಿ ಶೋಧ ನಡೆಸಿದ್ದಾರೆ. ಎನ್ಐಎ 240 ಸಾಕ್ಷಿಗಳ ಹೇಳಿಕೆ ಸೇರಿದಂತೆ 1,500 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿತ್ತು.
ದಕ್ಷಿಣ ಕನ್ನಡದಲ್ಲಿ ಎನ್ಐಎ: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯ ಒಂದು ಮನೆ ಹಾಗೂ ಬೆಳ್ತಂಗಡಿ, ಸುಳ್ಯ ಹಾಗೂ ಕೆಯ್ಯೂರು ಮೂಲದ ವ್ಯಕ್ತಿಗಳ ಮನೆಯಲ್ಲಿಎನ್ಐಎ ತಲಾಶ್ ನಡೆಸಿದೆ. ಬೆಂಗಳೂರಿನಿಂದ ಆಗಮಿಸಿದ ಐವರು ಅಧಿಕಾರಿಗಳಿದ್ದ ಎನ್ಐಎ ತಂಡಕ್ಕೆ ಬೆಳ್ತಂಗಡಿ ಹಾಗೂ ಸುಳ್ಯ ಪೊಲೀಸರು ಸಾಥ್ ನೀಡಿದ್ದಾರೆ.
ಬೆಳ್ತಂಗಡಿಯ ಕುವೆಟ್ಟು ಗ್ರಾಮದ ಮದಡ್ಕಕ್ಕೆ ಆಗಮಿಸಿದ ಎನ್ಐಎ ತಂಡ ಆರೋಪಿಗಾಗಿ ಹುಡುಕಾಟ ನಡೆಸಿದೆ. ಬುಧವಾರ ಸಂಜೆ ಆಟೋ ರಿಕ್ಷಾದಲ್ಲಿ ಬಂದು ಹೋಗಿದ್ದಾನೆ ಎಂಬ ಮಾಹಿತಿ ಆಧರಿಸಿ ಎನ್ಐಎ ಪರಿಶೀಲನೆ ನಡೆಸಿತು.