ಚಿಕ್ಕಮಗಳೂರು: ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಸರ್ಕಾರಿ ಐರಾವತ ಬಸ್ನಲ್ಲಿ ರಸ್ತೆ ಮಧ್ಯೆ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾಗಿರುವ ಘಟನೆ ಮುಂಜಾನೆ ನಡೆದಿದೆ.
ಡ್ರೈವರ್-ಕಂಡಕ್ಟರ್ ಸೇರಿ 40 ಜನ ಪ್ರಯಾಣಿಕರನ್ನು ಹೊತ್ತ ಐರಾವತ ಎಸಿ ಸ್ಲೀಪರ್ ಬಸ್ ಶಿವಮೊಗ್ಗದಿಂದ ಮೈಸೂರಿಗೆ ತೆರಳುತ್ತಿತ್ತು. ಮುಂಜಾನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ನೇರಲಕೆರೆ ಕ್ರಾಸ್ ಬಳಿ ಬಸ್ ತಲುಪಿದಾಗ ಬಸ್ನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಚಾಲಕ-ನಿರ್ವಾಹಕ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ರವಾನಿಸಿದರು. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳ ಬೆಂಕಿ ನಂದಿಸುವ ಕಾರ್ಯ ಮಾಡಿದೆ. ಆದರೂ ಬಸ್ ಶೇ. 90ರಷ್ಟು ಸುಟ್ಟು ಕರಕಲಾಗಿದೆ.
ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಂಡ್ಯ: ಬಿರುಗಾಳಿ ಸಹಿತ ಮಳೆಗೆ ರೈಲಿನ ಮೇಲೆ ಬಿದ್ದ ಮರ; ಲೋಕೋ ಪೈಲಟ್‌ಗೆ ಗಾಯ - Mandya Rain