ಕೊಪ್ಪಳ: ಇಂದಿನಿಂದ ನಾಡಿನಾದ್ಯಂತ ಗಣೇಶಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಕೊಪ್ಪಳದಲ್ಲಿ ಹಿಂದೂ ಮುಸ್ಲಿಂ ಸ್ನೇಹಿತರಿಬ್ಬರು ಗಣೇಶ ಹಬ್ಬವನ್ನು ಕಳೆದ ಎಂಟು ವರ್ಷಗಳಿಂದ ಕೂಡಿಕೊಂಡು ಆಚರಿಸುತ್ತಿದ್ದಾರೆ. ಕೊಪ್ಪಳ ನಗರದ ದೇವರಾಜ ಅರಸ ಕಾಲೊನಿಯ ಶಿವರಾಜ್ ಅವರ ಮನೆಗೆ ಅವರ ಸ್ನೇಹಿತ ಶ್ಯಾಮೀದ್ ಅಲಿ ಅವರು ಪ್ರತಿ ವರ್ಷ ಗಣೇಶ ಹಬ್ಬಕ್ಕೆ ಬರುತ್ತಾರೆ. ಶಿವರಾಜ್ ಅವರ ಮನೆಯಲ್ಲಿ ಪ್ರತಿಷ್ಠಾಪಿಸಲಾಗುವ ಗಣೇಶಮೂರ್ತಿಯನ್ನು ಶ್ಯಾಮೀದ್ ಅಲಿ ಅವರೇ ತೆಗೆದುಕೊಂಡು ಹೋಗುತ್ತಾರೆ.
ಪಿಯುಸಿಯಿಂದಲೂ ಸ್ನೇಹಿತರಾಗಿರುವ ಶಿವರಾಜ್ ಹಾಗೂ ಶ್ಯಾಮೀದ್ ಅಲಿ ಅವರು ಹಿಂದೂ ಮುಸ್ಲಿಂ ಹಬ್ಬಗಳಲ್ಲಿ ಯಾವುದೇ ಬೇಧವಿಲ್ಲದೆ ಪಾಲ್ಗೊಂಡು ಆಚರಿಸುತ್ತಾರೆ. ಶಿವರಾಜ್ ಅವರ ಮನೆಯಲ್ಲಿ ನಡೆಯುವ ಹಬ್ಬಗಳಲ್ಲಿ ಶ್ಯಾಮೀದ್ ಅಲಿ ಹಾಗೂ ಶ್ಯಾಮೀದ್ ಅಲಿ ಅವರ ಮನೆಯಲ್ಲಿ ನಡೆಯುವ ಹಬ್ಬಗಳಲ್ಲಿ ಶಿವರಾಜ್ ಅವರು ಪಾಲ್ಗೊಳ್ಳುತ್ತಾರೆ. ಜಾತಿ, ಧರ್ಮಕ್ಕಿಂತ ಸ್ನೇಹ ಮಿಗಿಲಾಗಿದ್ದು, ನಾವೆಲ್ಲರೂ ಒಂದೇ. ಇಲ್ಲಿ ಯಾರೂ ಬೇರೆ ಅಲ್ಲ. ಹೀಗಾಗಿ ನಾನು ಹಿಂದೂ ಹಬ್ಬಗಳಲ್ಲಿ ಪಾಲ್ಗೊಳ್ಳುತ್ತೇನೆ ಎನ್ನುತ್ತಾರೆ ಶ್ಯಾಮೀದ್ ಅಲಿ.