ಕೊಪ್ಪಳ: ಲೋಕಸಭಾ ಚುನಾವಣೆಗೆ ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಬಿಜೆಪಿಯಿಂದ ಟಿಕೆಟ್ ನಿರಾಕರಣೆ ಮಾಡಿದ ಹಿನ್ನೆಲೆ ಇಂದು ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು ಭಾರತಮಾತೆ ಭಾವಚಿತ್ರದ ಗ್ಲಾಸ್, ಕಚೇರಿಯ ಕಿಟಕಿ ಗಾಜುಗಳನ್ನು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದ ಬಿಜೆಪಿ ಕಚೇರಿಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಬಸವರಾಜ ಅವರು ಸುದ್ದಿಗೋಷ್ಠಿ ನಡೆಸುವಾಗ ಅಲ್ಲಿಗೆ ಬಂದ ಸಂಗಣ್ಣ ಬೆಂಬಲಿಗರು, ಬಾಗಿಲು ಬಡಿದು ಹೊರಗಡೆ ಬನ್ನಿ ಎಂದು ಆಗ್ರಹಿಸಿದರು. ಬಿಜೆಪಿ ಅಭ್ಯರ್ಥಿ ಡಾ ಬಸವರಾಜ ಕ್ಯಾವಟರ್ ಪಕ್ಷದಲ್ಲಿ ಯಾರಿಗೂ ಗೊತ್ತೇ ಇಲ್ಲ. ಆದರೂ ಟಿಕೆಟ್ ನೀಡಲಾಗಿದೆ. ಸಂಗಣ್ಣ ಕರಡಿ ಅವರ ರಾಜಕೀಯ ಬದುಕು ಅಂತ್ಯಗೊಳಿಸಲು ಎಲ್ಲರೂ ಸೇರಿ ಹುನ್ನಾರ ಮಾಡಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದರು.
ಇದಕ್ಕೂ ಮೊದಲು ಬಸವರಾಜ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಸಂಸದ ಸಂಗಣ್ಣ ಅವರನ್ನು ಭೇಟಿಯಾಗಲು ಅವರ ಮನೆಗೆ ಹೋದಾಗ ಕಾರ್ಯಕರ್ತರು ಅಲ್ಲಿಯೂ ವಿರೋಧ ವ್ಯಕ್ತಪಡಿಸಿದರು. ಕಾರ್ಯಕರ್ತರನ್ನು ತಳ್ಳಿಕೊಂಡೇ ಸಂಗಣ್ಣ ಅವರ ಮನೆ ಒಳಗಡೆ ಹೋದ ಬಸವರಾಜ ಹಾಗೂ ದೊಡ್ಡನಗೌಡ ಅವರಿಗೆ ಸಂಸದರ ಜೊತೆ ಮಾತನಾಡಲು ಕಾರ್ಯಕರ್ತರು ಅವಕಾಶ ಕೊಡಲಿಲ್ಲ.
ರಾಜ್ಯ ನಾಯಕರ ವಿರುದ್ಧ ಅಸಮಾಧಾನ: ಈ ವೇಳೆ ಹಾಲಿ ಸಂಸದ ಸಂಗಣ್ಣ ಕರಡಿ, ಪಕ್ಷದ ನಿರ್ಧಾರಕ್ಕೆ ಎಲ್ಲರೂ ಬದ್ಧವಾಗಿರಲೇಬೇಕು. ನಮ್ಮ ವೈಯಕ್ತಿಕ ನೋವು ನಲಿವು ಮುಖ್ಯವಲ್ಲ. ಕಾರ್ಯಕರ್ತರ ಅಸಮಾಧಾನ ನಿವಾರಿಸುವ ಕೆಲಸ ಮಾಡುತ್ತಿದ್ದೇನೆ. ಟಿಕೆಟ್ ಘೋಷಣೆ ನಂತರ ಪಕ್ಷದವರು ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ. ಟಿಕೆಟ್ ನೀಡದ ಬಗ್ಗೆ ನನ್ನ ಸಂಪರ್ಕ ಮಾಡಬೇಕಿತ್ತು ಎಂದು ರಾಜ್ಯ ನಾಯಕರ ವಿರುದ್ಧ ಸಂಸದ ಕರಡಿ ಸಂಗಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ನನಗೆ ಇನ್ನೊಮ್ಮೆ ನನಗೆ ಅವಕಾಶ ನೀಡಿ ಅಂತ ಮನವಿ ಮಾಡಿದ್ದೆ. ಎಲ್ಲರೂ ಕೂಡ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಬೇರೆ ಪಕ್ಷದವರು ನನಗೆ ಟಿಕೆಟ್ ಸಿಗದಿದ್ದಕ್ಕೆ ಸೌಜನ್ಯಕ್ಕಾಗಿ ಕರೆ ಮಾಡಿ ಮಾತನಾಡಿದ್ದಾರೆ. ಆದರೆ, ಬೇರೆ ಪಕ್ಷ ಸೇರುವ ಬಗ್ಗೆ ಯಾರು ಮಾತನಾಡಿಲ್ಲ, ನಾನೂ ಕೂಡಾ ಮಾತನಾಡಿಲ್ಲ. ಸದ್ಯ ನಾನು ಬಿಜೆಪಿ ಅಭ್ಯರ್ಥಿ ಬದಲಾವಣೆ ಮಾಡಿ ನನಗೆ ಟಿಕೆಟ್ ನೀಡಿ ಅಂತ ಒತ್ತಡ ಮಾಡುವುದಿಲ್ಲ ಎಂದರು.
ನಾನು ಸ್ಪರ್ಧಿಸುವುದು ಬೇಡ ಅಂತಲೇ ನನಗೆ ಟಿಕೆಟ್ ನೀಡಿಲ್ಲ. ಇದೀಗ ಮತ್ತೆ ಟಿಕೆಟ್ ಬದಲಾವಣೆ ಮಾಡುವಂತೆ ಒತ್ತಡ ಹಾಕುವುದಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಕುಟುಂಬಕ್ಕೆ ನಾವು ಟಿಕೆಟ್ ಕೇಳಿರಲಿಲ್ಲ. ಆದರೆ ಪಕ್ಷದ ನಾಯಕರೇ ಒತ್ತಾಯ ಮಾಡಿ ನಮ್ಮ ಸೊಸೆಗೆ ಟಿಕೆಟ್ ಕೊಟ್ಟಿದ್ದರು. ಇಂದು ಬಿಜೆಪಿ ಅಭ್ಯರ್ಥಿ ದಿಢೀರ್ ನಮ್ಮ ಮನೆಗೆ ಬಂದರು. ಈ ಸಮಯದಲ್ಲಿ ಕಾರ್ಯಕರ್ತರು ಗದ್ದಲ ಮಾಡಿದ್ದರಿಂದ ಭೇಟಿ ಮಾಡಲು ಆಗಲಿಲ್ಲ. ಆ ಮೇಲೆ ಅವರನ್ನು ಭೇಟಿಯಾಗಿ ಚರ್ಚೆ ಮಾತನಾಡುತ್ತೇನೆ ಎಂದರು.
ಸಂಗಣ್ಣ ಕರಡಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ: ದೊಡ್ಡನಗೌಡ ಪಾಟೀಲ್:- ಹಾಲಿ ಸಂಸದ ಸಂಗಣ್ಣ ಕರಡಿ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸುತ್ತೇವೆ ಎಂದು ವಿಧಾನಸಭೆ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಹೇಳಿದರು.
ಸಂಗಣ್ಣ ಅವರಿಗೆ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರು ಅಸಮಾದಾನಗೊಂಡಿದ್ದಾರೆ. ಅವರೂ ಸಹ ನಮ್ಮ ಕಾರ್ಯಕರ್ತರು. ಸಂಗಣ್ಣ ಅವರಿಗೆ ಟಿಕೆಟ್ ತಪ್ಪಿರುವ ಬಗ್ಗೆ ವರಿಷ್ಠರು ನನ್ನನ್ನು ಸೇರಿದಂತೆ ಸಂಗಣ್ಣನವರು ಮತ್ತು ಇತರ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಪಕ್ಷದ ನಿರ್ಧಾರಕ್ಕೆ ನಾವು ಬದ್ದ. ನಿಶ್ಚಿತವಾಗಿಯೂ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿದರು.
ಇದನ್ನೂಓದಿ:ಲೋಕಸಭಾ ಚುನಾವಣೆ ಸ್ಪರ್ಧೆ ವಿಚಾರ ಹೈಕಮಾಂಡ್ ತಿರ್ಮಾನಕ್ಕೆ ನಾನು ಬದ್ಧ: ಜಗದೀಶ್ ಶೆಟ್ಟರ್