ಬೆಂಗಳೂರು: ಕೊಪ್ಪಳ ಸಂಸದ ಕರಡಿ ಸಂಗಣ್ಣ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಆಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು.
ಕೊಪ್ಪಳ ಬಿಜೆಪಿ ಟಿಕೆಟ್ ವಂಚಿತ ಹಾಲಿ ಸಂಸದ ಕರಡಿ ಸಂಗಣ್ಣ ನಿನ್ನೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ದಾಸರಹಳ್ಳಿ ಕೃಷ್ಣಮೂರ್ತಿ, ನಿವೃತ್ತ ಐಎಎಸ್ ಅಧಿಕಾರಿ ಎ.ಎಸ್. ಪುಟ್ಟಸ್ವಾಮಿ, ಪತ್ರಕರ್ತೆ ಸ್ವಾತಿ ಚಂದ್ರಶೇಖರ್ ಮತ್ತಿತರರು ಕೂಡ ಕಾಂಗ್ರೆಸ್ ಸೇರಿದರು. ಈ ವೇಳೆ ಸಚಿವ ಶಿವರಾಜ್ ತಂಗಡಗಿ, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಉಪಸ್ಥಿತರಿದ್ದರು.
ಕಾಂಗ್ರೆಸ್ ತತ್ವ ಸಿದ್ಧಾಂತ ಮೆಚ್ಚಿ ಸೇರ್ಪಡೆ: ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಕರಡಿ ಸಂಗಣ್ಣ, ''ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಲು ಮೂಲ ಕಾರಣ ಲಕ್ಷ್ಮಣ ಸವದಿ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ಸೇರ್ಪಡೆ ಆಗಿದ್ದೇನೆ. ರಾಜಶೇಖರ್ ಹಿಟ್ನಾಳ್ ಅವರನ್ನು ಗೆಲ್ಲಿಸುತ್ತೇವೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್. ನಿಜವಾಗಿಯೂ ಇದು ಸಂಭ್ರಮದ ದಿನ'' ಎಂದರು.
''14 ವರ್ಷಗಳ ಹಿಂದೆ ಲಕ್ಷ್ಮಣ್ ಸವದಿಯವರು ಹೋರಾಟ ಮಾಡುತ್ತಿದ್ದಾಗ ನಿನಗೆ ಅಭಿವೃದ್ಧಿ ಬೇಕಾ ಹೋರಾಟ ಬೇಕಾ ಅಂದ್ರು. ಆಗ ನಾನು ಬಿಜೆಪಿ ಪಕ್ಷ ಸೇರ್ಪಡೆಯಾದೆ. ಇದು ಕಾಕತಾಳೀಯ, ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ. ಕೊಪ್ಪಳದಲ್ಲಿ ನಮ್ಮ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ್ ಗೆಲ್ಲಿಸಿಕೊಂಡು ಬರಬೇಕು ಎಂದು ನಾವೆಲ್ಲರೂ ಚಾಲೆಂಜ್ ತೆಗೆದುಕೊಂಡಿದ್ದೇವೆ. ವ್ಯಕ್ತಿಗತ ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಬಂದಿಲ್ಲ. ಎರಡು ಜಿಲ್ಲೆಯ ಅಭಿವೃದ್ಧಿಗೆ ಸಿಎಂ, ಡಿಸಿಎಂ ಬೆಂಬಲ ನೀಡುತ್ತಾರೆ ಅಂತ ನಂಬಿದ್ದೇನೆ. ತಾಗ್ಯ,ಬಲಿದಾನ ಮಾಡಿದ್ದು ಕಾಂಗ್ರೆಸ್ ಪಕ್ಷ. ಹೀಗಾಗಿ, ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ'' ಎಂದು ತಿಳಿಸಿದರು.
ಬಿಎಸ್ವೈ ಒಪ್ಪದವರಿಗೆ ಟಿಕೆಟ್ ತಪ್ಪಿಸಲಾಗಿದೆ: ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ''ಬಿಜೆಪಿಯಲ್ಲಿ ಎರಡು ಬಣವಿದೆ. ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ಎಲ್. ಸಂತೋಷ್ ಬಣ. ಆದರೆ ಬಿ.ಎಸ್. ಯಡಿಯೂರಪ್ಪ ಅವರು ಒಪ್ಪದವರಿಗೆ ಲೋಕಸಭೆ ಟಿಕೆಟ್ ತಪ್ಪಿಸಲಾಗಿದೆ'' ಎಂದು ಹೇಳಿದರು.

''ಕ್ಷೇತ್ರದಲ್ಲಿ ಉತ್ತಮ ಹೆಸರು ಹೊಂದಿದವರು. ಒಳ್ಳೆಯ ಕೆಲಸ ಮಾಡಿದ್ದರು. ಹಾಗಿದ್ದರೂ ಬಿಜೆಪಿಯವರು ಏಕೆ ಟಿಕೆಟ್ ತಪ್ಪಿಸಿದರು ಅಂದು ಅರ್ಥ ಆಗಿಲ್ಲ. ಮಗನನ್ನು ಸಿಎಂ ಮಾಡಲು ಬಿಎಸ್ವೈ ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿಯಲ್ಲಿ ಯಡಿಯೂರಪ್ಪ ಹಾಗೂ ಸಂತೋಷ್ ಗುಂಪಿದೆ. ಕರ್ನಾಟಕದಲ್ಲಿ ಗೆಲ್ಲುವ ವಿಶ್ವಾಸ ಬಿಜೆಪಿಗಿಲ್ಲ. ಹೀಗಾಗಿ ಅನೇಕ ಲೋಕಸಭಾ ಸ್ಥಾನ ಬದಲಾವಣೆ ಮಾಡಿದ್ದಾರೆ. ಆಡಳಿತ ವಿರೋಧಿ ಅಲೆ ಇದೆ. ಕಾಂಗ್ರೆಸ್ ಈ ಬಾರಿ ಹೆಚ್ಚು ಸ್ಥಾನ ಗೆಲ್ಲುತ್ತದೆ. ಕರ್ನಾಟಕದಲ್ಲಿ ಐದು ಗ್ಯಾರಂಟಿ ಅಲೆ ಇದೆ. ಜನರಿಗೆ ಕಾಂಗ್ರೆಸ್ ಬಗ್ಗೆ ವಿಶ್ವಾಸ ನಂಬಿಕೆ ಬಂದಿದೆ'' ಎಂದರು.
''ಬಿಜೆಪಿ ಅಂದರೆ ಸುಳ್ಳು ಹೇಳುವವರು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಮೋದಿ ಮಾಡಿದ್ದಾರೆ. ಆದರೆ ಈ ಬಾರಿ ಯಶಸ್ಸು ಸಿಗಲು ಸಾಧ್ಯವಿಲ್ಲ. 220 ಸೀಟು ಗೆದ್ದರೆ ಜಾಸ್ತಿ, ಸಮೀಕ್ಷೆಯಲ್ಲಿ 200 ಸ್ಥಾನ ಗೆಲ್ಲುವ ವರದಿ ಇದೆ. ಹಾಗಾಗಿ, 400 ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬರಲ್ಲ. ಇಂಡಿಯಾ ಪರವಾದ ಒಲವು ಜನರಲ್ಲಿ ಇದೆ'' ಎಂದರು.
''ಲೋಕಸಭಾ ಚುನಾವಣೆಯಲ್ಲಿ ನಮ್ಮ ಆಂತರಿಕ ವರದಿಯಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲುತ್ತದೆ ಎಂದಿದೆ. ಕರಡಿ ಸಂಗಣ್ಣ ಬಂದ ಬಳಿಕ ಕೊಪ್ಪಳದಲ್ಲಿ ಇನ್ನಷ್ಟು ಶಕ್ತಿ ಬಂದಿದೆ. ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗುವುದು'' ಎಂದು ತಿಳಿಸಿದರು.
ರಾಜ್ಯದಲ್ಲಿ ಗ್ಯಾರಂಟಿ ಪರ ಅಲೆ: ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ''ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಗ್ಯಾರಂಟಿ ಪರವಾದ ಅಲೆ ಇದೆ. ಕೇರಳದಲ್ಲಿ 20 ಕ್ಷೇತ್ರಗಳನ್ನು ಯುಡಿಎಫ್ ಗೆಲ್ಲಲಿದೆ. ಕರ್ನಾಟಕದಲ್ಲಿ 14 ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿದ್ದಾರೆ. ಯಾವ ಕಾರಣಕ್ಕೂ ಎನ್ಡಿಎ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಬೆಲೆ ಏರಿಕೆ ನಿರುದ್ಯೋಗ ಚರ್ಚೆಯಾಗುತ್ತಿದೆ. ಸಂವಿಧಾನ ಬದಲಾವಣೆ ಮಾಡಲ್ಲ ಎಂದು ಪ್ರಧಾನಿ ಇವಾಗ ಹೇಳಿಕೆ ಕೊಡುತ್ತಿದ್ದಾರೆ. ಆದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದಿದ್ದ ಬಿಜೆಪಿ ಸಂಸದರ ವಿರುದ್ಧ ಕ್ರಮ ಕೈಗೊಳ್ಳಲು ಆಗಿಲ್ಲ'' ಎಂದರು.
''ಬಿಜೆಪಿ ಹಿಂದೆ ಕೊಟ್ಟ ಪ್ರಣಾಳಿಕೆ ಕಾರ್ಯರೂಪಕ್ಕೆ ಬಂದಿಲ್ಲ. ಸೋಲಿನ ಭಯದಿಂದಲೇ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಗ್ಯಾರಂಟಿ ಚುನಾವಣೆಯ ಬಳಿಕ ಮುಂದುವರೆಯಲ್ಲ ಎಂದು ಬಿಜೆಪಿ ಅಧ್ಯಕ್ಷರು ಹೇಳಿದ್ದಾರೆ. ಆದರೆ, ನಿಮ್ಮ ಹಣದ ಬರಹದಲ್ಲಿ ಗ್ಯಾರಂಟಿಯನ್ನು ಮುಟ್ಟಲು ರಾಜ್ಯದ ಜನರು ಬಿಡಲ್ಲ. ಗ್ಯಾರಂಟಿಯಿಂದ ತಾಯಂದಿರು ದಾರಿ ತಪ್ಪುತ್ತಿದ್ದಾರೆ ಎಂಬ ಹೆಚ್ಡಿಕೆ ಹೇಳಿಕೆಗೆ ಮಹಿಳೆಯರು ಬುದ್ಧಿ ಕಲಿಸುತ್ತಾರೆ. ಶಿವಮೊಗ್ಗದಲ್ಲಿ ಬಿಎಸ್ವೈ ಪುತ್ರ ಗೆಲ್ಲಲು ಸಾಧ್ಯವಿಲ್ಲ ಎಂದು ಡಿಕೆಶಿ ಭವಿಷ್ಯ ನುಡಿದರು.
ಇದನ್ನೂ ಓದಿ: ಬಿಜೆಪಿ ಸೇರಿದ ಮಾಜಿ ಶಾಸಕ ಅಖಂಡ: ಕರಡಿ ಸಂಗಣ್ಣ ಕಾಂಗ್ರೆಸ್ ಸೇರ್ಪಡೆಗೆ ಬಿಎಸ್ವೈ ಅಸಮಾಧಾನ - Akhanda Srinivas Murthy