ಕೋಲಾರ ಲೋಕಸಭಾ ಕ್ಷೇತ್ರ: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು 71 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಮಲ್ಲೇಶ್ ಬಾಬು 6,91,481 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ.ವಿ ಗೌತಮ್ ಸೋಲು ಕಂಡಿದ್ದಾರೆ.
- ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು - 6,91,481 ಮತಗಳು.
- ಕಾಂಗ್ರೆಸ್ ಅಭ್ಯರ್ಥಿ ಕೆ.ವಿ. ಗೌತಮ್ - 6,20,093 ಮತಗಳು.
- ಮತಗಳ ಅಂತರ: 71,388 ಮತಗಳು.
ತೀವ್ರ ಕುತೂಹಲ ಕೆರಳಿಸಿದ್ದ ಕೋಲಾರ ಮೀಸಲು ಕ್ಷೇತ್ರದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆ.ವಿ. ಗೌತಮ್ ಹಾಗೂ ಬಿಜೆಪಿ - ಜೆಡಿಎಸ್ ಮೈತ್ರಿಯ ಎನ್‌ಡಿಎ ಅಭ್ಯರ್ಥಿಯಾಗಿ ಮಲ್ಲೇಶ್‌ಬಾಬು ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು. ಜೆಡಿಎಸ್ನ ಮಲ್ಲೇಶ್ ಬಾಬು ಸತತ ಮುನ್ನಡೆ ಸಾಧಿಸಿ, ಇದೀಗ ವಿಜಯ ಪತಾಕೆ ಹಾರಿಸಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದ ಎಂಟೂ ಕ್ಷೇತ್ರಗಳಲ್ಲಿ ಮಹಿಳಾ ಮತದಾರರದ್ದೇ ಮೇಲುಗೈ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಮಹಿಳಾ ಮತದಾರರು ನಿರ್ಣಾಯಕ ಪಾತ್ರ ವಹಿಸಿದ್ದರು. ಚುನಾವಣೆ ಘೋಷಣೆಯಾದ ದಿನದಿಂದ ಉಭಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಮತದಾರರ ಗಮನ ಸೆಳೆದಿದ್ದರು. ಬಿಜೆಪಿ - ಜೆಡಿಎಸ್ ಮೈತ್ರಿಯ ಎನ್‌ಡಿಎ ಅಭ್ಯರ್ಥಿ ಮಲ್ಲೇಶ್‌ಬಾಬು ಪರ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೈ ನಾಯಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಆದಿಯಾಗಿ ಹಲವರು ಭರ್ಜರಿ ಪ್ರಚಾರ ಕೈಗೊಂಡಿದ್ದರು. ಎಲ್ಲ ಘಟಾನುಘಟಿಗಳು ಕ್ಷೇತ್ರದ ಮತದಾರರ ಗಮನ ಸೆಳೆಯುಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕೋಲಾರ ಕ್ಷೇತ್ರವು ಸಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಿಲು, ಕೋಲಾರ ಚಿನ್ನದ ಕ್ಷೇತ್ರ, ಬಂಗಾರಪೇಟೆ, ಕೋಲಾರ ಮತ್ತು ಮಾಲೂರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ರಾಜ್ಯದ ಮೊದಲ ಹಂತದಲ್ಲಿ ಈ ಕ್ಷೇತ್ರಕ್ಕೆ ಮತದಾನ ನಡೆದಿತ್ತು. ಆದರೆ, ಮತದಾನಕ್ಕೂ ಮುನ್ನ ಅಭ್ಯರ್ಥಿಗಳ ಆಯ್ಕೆ ಗೊಂದಲದಿಂದ ಕ್ಷೇತ್ರವು ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಮತದಾರರ ಮಾಹಿತಿ: ನಡೆದ ಚುನಾವಣೆಯಲ್ಲಿ ಸೇವಾ ಮತದಾರರು ಸೇರಿದಂತೆ ಕ್ಷೇತ್ರದ ಒಟ್ಟು 17,28,198 ಮತದಾರರಲ್ಲಿ 8,53,829 ಪುರುಷರು, 8,72,874 ಮಹಿಳೆಯರು, 211 ಇತರ, 1,284 ಸೇವಾ ಮತದಾರರನ್ನು ಹೊಂದಿದೆ. 2019ರಲ್ಲಿ ಚುನಾವಣೆಯಲ್ಲಿ ಶೇ. 73.25 ರಷ್ಟು ಮತದಾನದ ಪ್ರಮಾಣ ದಾಖಲಾಗಿದ್ದರೆ, ಈ ಬಾರಿಯ ಚುನಾವಣೆಯಲ್ಲಿ ಶೇ. 77.08ರಷ್ಟು ಮತದಾನದ ಪ್ರಮಾಣ ದಾಖಲಾಗಿತ್ತು.
ಇದನ್ನೂ ಓದಿ: ಲೋಕಸಮರ: ಯಾರಿಂದ ಯಾರಿಗೆ ಹೊಡೆತ? ರಾಜ್ಯದ 28 ಕ್ಷೇತ್ರಗಳ ಮಾಹಿತಿ - Lok Sabha Election