ಬೆಂಗಳೂರು: ಪ್ರತಿ ವರ್ಷ ಕೊಡ ಮಾಡುವ ಕೇಂದ್ರದ ಗೃಹಮಂತ್ರಿ ದಕ್ಷತಾ ಪದಕಕ್ಕೆ ಈ ಬಾರಿ ರಾಜ್ಯದ ಏಳು ಮಂದಿ ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ.
ಕ್ಲಿಷ್ಟ ರೀತಿಯ ಅಪರಾಧ ಪ್ರಕರಣಗಳನ್ನು ಭೇದಿಸಿ ಉತ್ತಮ ತನಿಖೆ ನಡೆಸುವ ತನಿಖಾಧಿಕಾರಿಗಳಿಗೆ ಪ್ರತಿ ವರ್ಷ ಕೇಂದ್ರ ಗೃಹ ಸಚಿವಾಲಯವು ಗೃಹಮಂತ್ರಿ ಹೆಸರಿನಲ್ಲಿ ಪದಕ ನೀಡುತ್ತದೆ. 2024ರ ಸಾಲಿನಲ್ಲಿ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಹಾಗೂ ಕೇಂದ್ರೀಯ ಸಶಸ್ತ್ರ ಪಡೆಗಳ ಒಟ್ಟು 463 ಸಿಬ್ಬಂದಿಗೆ ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕಗಳನ್ನು ನೀಡಲಾಗಿದೆ. ಅವರಲ್ಲಿ ಈ ವರ್ಷ ಅಪರಾಧ ಪ್ರಕರಣಗಳಲ್ಲಿ ಅತ್ಯುತ್ತಮ ತನಿಖೆ ನಡೆಸಿದ್ದ ರಾಜ್ಯದ ಇಬ್ಬರು ಡಿವೈಎಸ್ಪಿಗಳು ಸೇರಿ 7 ಮಂದಿ ಅಧಿಕಾರಿಗಳಿಗೆ ಪದಕಗಳು ಲಭಿಸಿವೆ.
ಪದಕ ಪಡೆದವರ ವಿವರ: ರಾಜ್ಯ ಆಂತರಿಕಾ ಭದ್ರತಾ ವಿಭಾಗದ ಡಿವೈಎಸ್ಪಿ ಬಸವರಾಜ್ ಕೆ., ಬೆಂಗಳೂರು ನಗರದ ಎಸಿಪಿ ವಿ.ಎಲ್. ರಮೇಶ್, ಇನ್ಸ್ಪೆಕ್ಟರ್ಗಳಾದ ಉಮೇಶ್ ಕಾಂಬ್ಳೆ, ನರೇಂದ್ರ ಬಾಬು, ವಸಂತ್ ಕೆ.ಎಂ, ರಮೇಶ್ ಎಚ್, ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್ಎಸ್ಎಲ್) ಸೇವೆ ಸಲ್ಲಿಸುತ್ತಿರುವ ಡೆಪ್ಯೂಟಿ ಡೈರೆಕ್ಟರ್ ಡಾ.ಪ್ರವೀಣ್ ಸಂಗನಾಳ್ ಮಠ ಅವರಿಗೆ ಪದಕ ದೊರೆತಿದೆ.
ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ವಾರ್ಷಿಕೋತ್ಸವದ ಹಿನ್ನೆಲೆ ಪ್ರತಿ ವರ್ಷ ಅಕ್ಟೋಬರ್ 31 ರಂದು ಪದಕ ವಿಜೇತರನ್ನು ಘೋಷಣೆ ಮಾಡಲಾಗುತ್ತದೆ. ಪೊಲೀಸ್ ಅಧಿಕಾರಿಗಳ ಅತ್ಯುತ್ತಮ ಕೆಲಸವನ್ನು ಗುರುತಿಸಲು, ಉನ್ನತ ವೃತ್ತಿಪರ ಗುಣಮಟ್ಟವನ್ನು ಉತ್ತೇಜಿಸಲು ಮತ್ತು ವಿಶೇಷ ಕಾರ್ಯಾಚರಣೆ, ತನಿಖೆ, ಗುಪ್ತಚರ ಮತ್ತು ವಿಧಿವಿಜ್ಞಾನ ನಾಲ್ಕು ಕ್ಷೇತ್ರಗಳಿಗೆ ಸಂಬಂಧಿಸಿದ ಅಧಿಕಾರಿಗಳ ನೈತಿಕತೆಯನ್ನು ಹೆಚ್ಚಿಸಲು ಪದಕವನ್ನು ನೀಡಲಾಗುತ್ತದೆ.
ಇದನ್ನೂ ಓದಿ: ರಾಯಚೂರು ಜಿಲ್ಲೆಯ ಇಬ್ಬರು ಸಾಧಕರಿಗೆ 2024ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ