ಹುಬ್ಬಳ್ಳಿ: ಕೇಜ್ರಿವಾಲ್ ಒಬ್ಬ ದುರಹಂಕಾರಿಯಾಗಿದ್ದು, ಸಮನ್ಸ್‌ಗಳಿಗೆ ಉತ್ತರಿಸದ ಕಾರಣ ಬಂಧನವಾಗಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಕಾಂಗ್ರೆಸ್ನವರ ಬ್ಯಾಂಕ್ ಖಾತೆ ಸೀಜ್ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿ, ಇದು ಆದಾಯ ತೆರಿಗೆ ಸಂಬಂಧಿತ ವಿಷಯವಾಗಿದ್ದು, ಸರ್ಕಾರದ ಪಾತ್ರ ಇರುವುದಿಲ್ಲ. ಕಾಂಗ್ರೆಸ್ ಅನ್ನು ನಾವು ಶಕ್ತಿ ಹೀನಗೊಳಿಸುವ ಅಗತ್ಯವಿಲ್ಲ. ಜನರೇ ಶಕ್ತಿಹೀನಗೊಳಿಸಿದ್ದಾರೆ. ಕಾಂಗ್ರೆಸ್ನವರು ಯಾರೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳಿದರು.
ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆ ನಿಲ್ಲಿಸುತ್ತೇವೆ ಎಂಬ ಡಿಎಂಕೆ ನಾಯಕರ ಹೇಳಿಕೆಯನ್ನು ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಕಾಂಗ್ರೆಸ್ನವರು ಖಂಡಿಸುತ್ತಾರೆಯೇ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನೆ ಮಾಡಿದರು. ನಗರದಲ್ಲಿಂದು ಮಾತನಾಡಿದ ಅವರು, ಡಿಎಂಕೆ ಇಂಡಿಯಾ ಒಕ್ಕೂಟದ ಭಾಗವಾಗಿದ್ದು, ಮೇಕೆದಾಟು ಕುರಿತು ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ತಡೆಹಿಡಿಯುವುದಾಗಿ ಘೋಷಣೆ ಮಾಡಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಈ ಹಿಂದೆ ಕಾಂಗ್ರೆಸ್ನವರು ನಮ್ಮ ನೀರು, ನಮ್ಮ ಹಕ್ಕು ಎಂದು ಕೋವಿಡ್ ಸಂದರ್ಭದಲ್ಲಿ ಪಾದಯಾತ್ರೆ ಮಾಡಿದ್ದರು. ಇದೀಗ ಕಾಂಗ್ರೆಸ್ನವರು ಏನು ಹೇಳತ್ತಾರೆ?. ಇದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉತ್ತರ ಕೊಡಬೇಕು ಎಂದರು.
ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನ: ಕಾನೂನು ಹೇಳುವುದು ಏನು? - Kejriwal Arrest What Next
ಈಶ್ವರಪ್ಪರ ಅಸಮಾಧಾನವನ್ನು ಪಕ್ಷದ ವರಿಷ್ಠರು ಶಮನ ಮಾಡಲಿದ್ದಾರೆ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅಸಮಾಧಾನ ಶಮನಗೊಳಿಸಲಾಗುವುದು, ಪಕ್ಷದ ವರಿಷ್ಠರು ಅವರೊಂದಿಗೆ ಮಾತನಾಡಿ, ಸಮಾಧಾನ ಪಡಿಸಲಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರೊಬ್ಬ ಪಕ್ಷದ ಹಿರಿಯ ನಾಯಕರಾಗಿದ್ದು, ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂತಹ ಸಂದರ್ಭಗಳಲ್ಲಿ ನೋವಾಗುವುದು ಸಹಜ, ಈಶ್ವರಪ್ಪ ಸೇರಿದಂತೆ ಕರಡಿ ಸಂಗಣ್ಣ, ಡಿ.ವಿ.ಸದಾನಂದಗೌಡ ಸೇರಿದಂತೆ ಮತ್ತಿತರೊಂದಿಗೆ ಪಕ್ಷದ ವರಿಷ್ಠರು ಮಾತುಕತೆ ಮಾಡಿ ಸಮಾಧಾನ ಪಡಿಸಲಿದ್ದಾರೆ ಎಂದರು.
ಮೇಕೆದಾಟು ಯೋಜನೆ ಕುರಿತು ಕಾಂಗ್ರೆಸ್ ದ್ವಂದ್ವ ನೀತಿ ಅನುಸರಿಸುತ್ತಿದೆ. ಒಂದೆಡೆ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟಿಸಿದ ಕಾಂಗ್ರೆಸ್ ಅದನ್ನು ವಿರೋಧಿಸುವ ಡಿಎಂಕೆ ಜತೆಗೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದೆ. ಹೀಗಾಗಿ ಕಾಂಗ್ರೆಸ್ ಡಿಎಂಕೆಯೊಂದಿಗೆ ಮಾಡಿಕೊಂಡ ಹೊಂದಾಣಿಕೆಯಿಂದ ಹೊರಬರಬೇಕು ಎಂದು ಒತ್ತಾಯಿಸಿದರು.