ಮೈಸೂರು: ಮಹಾರಾಜ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್.ಎನ್.ಪದ್ಮನಾಭ ಅವರ ಪುತ್ರ, ನರೇನ್ ಕೌಶಿಕ್ (44) ಟ್ರಕ್ಕಿಂಗ್ ತೆರಳಿದ್ದ ವೇಳೆಯಲ್ಲಿ ಉಸಿರಾಟದ ತೊಂದರೆಯಿಂದ ಲಡಾಖ್ನ ಲೇಹ್‌ನಲ್ಲಿ ಸೆಪ್ಟೆಂಬರ್ 7ರಂದು ಮೃತಪಟ್ಟಿದ್ದಾರೆ.
ಸೆಪ್ಟೆಂಬರ್ 2 ರಂದು ಬೆಂಗಳೂರಿನಿಂದ ಸ್ನೇಹಿತರು, ಇಬ್ಬರು ವೈದ್ಯರು, ಇಬ್ಬರ್ ತರಬೇತುದಾರರೊಂದಿಗೆ ಟ್ರಕ್ಕಿಂಗ್ಗೆ ತೆರಳಲಾಗಿತ್ತು. ಸೆಪ್ಟೆಂಬರ್ 7ರಂದು ಲೇಹ್ ಬಳಿ 18,000 ಮೀಟರ್ ಎತ್ತರದಲ್ಲಿ ಉಸಿರಾಟದ ತೊಂದರೆಯಿಂದ ನಿಧನರಾದರು. ಸೆ.8 ರಂದು ಸಂಜೆ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಯಿತು. ನಂತರ ಮೃತದೇಹವನ್ನು ಹಸ್ತಾಂತರಿಸಲಾಗಿದೆ. ಸೆಪ್ಟೆಂಬರ್ 10 ರಂದು ಬೆಳಿಗ್ಗೆ ಲೇಹ್‌ನಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸಲಾಗಿದೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಮೈಸೂರು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅವರು ಲೇಹ್‌ನ ಜಿಲ್ಲಾಧಿಕಾರಿ ಸಂತೋಷ್ ಸುಖದೇವ್ ಅವರೊಂದಿಗೆ ಮಾತುಕತೆ ನಡೆಸಿದರು.
ಲೇಹ್ನಲ್ಲೇ ಅಂತ್ಯಸಂಸ್ಕಾರ: 18 ಸಾವಿರ ಅಡಿ ಎತ್ತರ ಪ್ರದೇಶದಿಂದ ಮೃತದೇಹವನ್ನು ತರುವುದು ಸವಾಲಾಗಿತ್ತು. ಮೈಸೂರಿಗೆ ತರುವ ಬಗ್ಗೆ ಯೋಜಿಸಲಾಗಿತ್ತು. ಆದರೆ, ಶವವನ್ನು ಸ್ಥಳದಿಂದ ತಂದು ಶವಪರೀಕ್ಷೆಯ ನಂತರ ಕುಟುಂಬಕ್ಕೆ ಹಸ್ತಾಂತರಿಸುವಾಗ 72 ಗಂಟೆಗಳು ಕಳೆದಿದ್ದರಿಂದ ಅಂತಿಮ ವಿಧಿಗಳನ್ನು ಲೇಹ್ನಲ್ಲಿಯೇ ಮಾಡಲು ಕುಟುಂಬ ನಿರ್ಧರಿಸಿತು.
ಸಿಆರ್‌ಪಿಎಫ್ ಐಜಿಪಿ ವಿಪುಲ್ ಕುಮಾರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ಲೇಹ್‌ನ ಜಿಲ್ಲಾ ವರಿಷ್ಠಾಧಿಕಾರಿ ಶ್ರುತಿ ಅರೋರಾ, ಬ್ರಿಗೇಡಿಯರ್ ಸೀತಾರಾಮ್ ಮತ್ತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಅಂತಿಮ ಸಂಸ್ಕಾರವನ್ನು ಅಲ್ಲಿಯೇ ನಡೆಸಲಾಗಿದೆ.
ಮೃತ ನರೇನ್ ಕೌಶಿಕ್ ಅವರು ಬೆಂಗಳೂರಿನ ಜಿಇ ಎಲೆಕ್ಟ್ರಿಕಲ್ಸ್ ಮೆಡಿಕಲ್ ಸಲಕರಣೆ ವಿಭಾಗದ ಉಪ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಮೈಸೂರಿನ ಎಸ್‌ಜೆಸಿಇ ಇಂಜಿನಿಯರ್ ಕಾಲೇಜಿನಲ್ಲಿ ಪಾಲಿಮರ್ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮೂರನೇ ರ್‍ಯಾಂಕ್ ಗಳಿಸಿದ್ದರು.
ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಪತ್ನಿ ರಾಧಿಕಾ, ಪುತ್ರಿ ವಾರುಣಿ, ತಂದೆ ಪ್ರೊ.ಆರ್.ಎನ್.ಪದ್ಮನಾಭ, ತಾಯಿ ನಾಗರತ್ನ ಪದ್ಮನಾಭ, ಆಸ್ಟ್ರೇಲಿಯಾದಲ್ಲಿ ಇಂಜಿಿನಿಯರ್ ಆಗಿರುವ ಸಹೋದರ ಪವನ್ ಕೌಶಿಕ್ ಅವರನ್ನು ಅಗಲಿದ್ದಾರೆ.