ಕಾರವಾರ: ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದ ಇಂಡಿಯಾ ಸ್ಕೇಟ್ ಗೇಮ್ಸ್ - 2024 ರಲ್ಲಿ ಕರ್ನಾಟಕ ಸಬ್ ಜೂನಿಯರ್ ಬಾಲಕಿಯರ ಮತ್ತು ಮಹಿಳಾ ಡರ್ಬಿ ತಂಡವು ಎರಡ ಪದಕಗಳನ್ನು ಕೊರಳಿಗೇರಿಸಿಕೊಂಡು ಸಾಧನೆ ಮಾಡಿದೆ.
ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ಒಟ್ಟು 22 ತಂಡಗಳು ಭಾಗವಹಿಸಿದ್ದವು. ಕರ್ನಾಟಕ ಸಬ್ ಜೂನಿಯರ್ ಬಾಲಕಿಯರ ತಂಡ ಫೈನಲ್‌ನಲ್ಲಿ ತಮಿಳುನಾಡು ತಂಡವನ್ನು 4-0 ಗೋಲುಗಳಿಂದ ಸೋಲಿಸಿ ಚಿನ್ನದ ಪದಕ ಗೆದ್ದಿದೆ. ಇನ್ನು ರಾಜ್ಯದ ಮಹಿಳಾ ಡರ್ಬಿ ತಂಡವು ಉತ್ತರಪ್ರದೇಶ ತಂಡವನ್ನು 62-29 ಅಂಕಗಳಿಂದ ಸೋಲಿಸಿ ಬೆಳ್ಳಿ ಪದಕ ಗೆದ್ದುಕೊಂಡಿದೆ. ಇಂಡಿಯಾ ಸ್ಕೇಟ್ ಗೇಮ್ಸ್ನಲ್ಲಿ ಕರ್ನಾಟಕ ತಂಡ ಇದೇ ಮೊದಲ ಬಾರಿಗೆ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದಿರುವುದು ವಿಶೇಷ.
ಕರ್ನಾಟಕ ತಂಡವನ್ನು ಪ್ರತಿನಿಧಿಸಿದವರ ಆಟಗಾರರ ಪೈಕಿ ಸಬ್ ಜೂನಿಯರ್ ಬಾಲಕಿಯರ ತಂಡದಲ್ಲಿ ಆಧ್ಯಾ ನಾಯ್ಕ್ ಕ್ಯಾಪ್ಟನ್ ಕೈಗಾ, ಆರ್ಯ ಮಂಜುನಾಥ್ ಬೆಂಗಳೂರು, ಭವಾನಿತಾ ತುಮಕೂರು, ದೇದೀಪ್ಯ ತುಮಕೂರು, ಅಕ್ಷರ ಶಿರ್ಸಿ, ಖುಷಿ ಶಿರ್ಸಿ, ಆರಾಧ್ಯ ಮೆನನ್ ಕಾರವಾರ, ಡಿಂಪನ ತುಮಕೂರು, ಕುಶಾಲ ಬೆಂಗಳೂರು ಇದ್ದರು.
ಮಹಿಳಾ ಡರ್ಬಿ ತಂಡದಲ್ಲಿ ತ್ರಿಷಾ ಹುಬ್ಬಳ್ಳಿ, ಜಯತೇಶನ ತುಮಕೂರು, ಅನಘಾ ಸಿರ್ಸಿ, ಶೆಫಾಲಿ ಬೆಳಗಾವಿ, ಕುಶಿ ಬೆಳಗಾವಿ, ಸೇಜಲ್ ಯಲ್ಲಾಪುರ, ಸಾನಿಕಾ ದಾಂಡೇಲಿ, ಸಾಯಿ ಸೂರಜ್ ಶಿಂಧೆ ಬೆಳಗಾವಿ, ಮುಸದ್ದಿಕ ಬೆಳಗಾವಿ, ಭೂಮಿಕಾ ತುಮಕೂರು ಇದ್ದರು.
ಕರ್ನಾಟಕದ ಎರಡು ತಂಡದ ಆಟಗಾರರಿಗೆ ದಿಲೀಪ್ ಹಣಬರ್ ಅವರು ಮುಖ್ಯ ತರಬೇತುದಾರಾಗಿದ್ದಾರೆ. ಸಾಧಕ ಸ್ಕೇಟರ್ಗಳಿಗೆ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಕೋರ್ಟ್ ಮುಂದೆ ತನ್ನ ದೇಹ ತೂಕ ಹೆಚ್ಚಿದ್ದರ ಕಾರಣ ವಿವರಿಸಿದ ಕುಸ್ತಿಪಟು ವಿನೇಶ್ ಫೋಗಟ್ - Vinesh Phogat
ಇದನ್ನೂ ಓದಿ: ಕಳೆದ 44 ವರ್ಷಗಳಲ್ಲಿ ಭಾರತ ಗೆದ್ದ ಪದಕಗಳೆಷ್ಟು: 24 ವರ್ಷಗಳಲ್ಲಿ ಬಂದ ಚಿನ್ನವೆಷ್ಟು? - OLYMPICS MEDALS FOR INDIA