ಬೆಂಗಳೂರು: ಮುಂದಿನ 5 ವರ್ಷಗಳಲ್ಲಿ ರಾಜ್ಯದ ಬಾಹ್ಯಾಕಾಶ ವಲಯಕ್ಕೆ 3 ಶತಕೋಟಿ ಡಾಲರ್ ಹೂಡಿಕೆಯನ್ನು ಆಕರ್ಷಿಸುವ ಗುರಿ ಹೊಂದಿದ ನೂತನ ‘ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2024-29’ರ ಕರಡು ವರದಿಯನ್ನು ಐಟಿ-ಬಿಟಿ ಇಲಾಖೆ ಬಿಡುಗಡೆ ಮಾಡಿದೆ.
ಬೆಂಗಳೂರು ಅರಮನೆಯಲ್ಲಿ ಗುರುವಾರ ನಡೆದ 27ನೇ ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ್, ಡಿಆರ್‌ಡಿಒ ನಿರ್ದೇಶಕ ಡಾ.ಬಿ.ಕೆ.ದಾಸ್ ಕರಡು ನೀತಿ ಬಿಡುಗಡೆ ಮಾಡಿದರು.
ಬಾಹ್ಯಾಕಾಶ ವಲಯದಲ್ಲಿ ಉದ್ಯೋಗ ಸೃಷ್ಟಿಯ ಜೊತೆಗೆ ಉದ್ಯೋಗಾವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದೂ ಸೇರಿದಂತೆ ಬಾಹ್ಯಾಕಾಶ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಅಂಶಗಳು ಬಾಹ್ಯಾಕಾಶ ತಂತ್ರಜ್ಞಾನ ನೀತಿ 2024-29ರ ಕರಡಿನಲ್ಲಿದೆ. ಅಲ್ಲದೆ, ರಾಷ್ಟ್ರೀಯ ಮಾರುಕಟ್ಟೆಯ ಶೇ.50ರಷ್ಟು ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಶೇ.5ರಷ್ಟು ಪಾಲನ್ನು ರಾಜ್ಯ ಹಿಡಿದಿಟ್ಟುಕೊಳ್ಳುವ ಉದ್ದೇಶದೊಂದಿಗೆ ನೂತನ ನೀತಿ ಸಿದ್ಧಪಡಿಸಲಾಗಿದೆ.
ಪ್ರಮುಖವಾಗಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುವುದಕ್ಕೆ ನಿಪುಣರನ್ನು ಸಿದ್ಧಪಡಿಸಲು 1,500 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 5 ಸಾವಿರ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ ನೀಡುವುದಾಗಿ ಕರಡು ನೀತಿಯಲ್ಲಿ ತಿಳಿಸಲಾಗಿದೆ.
ರಾಜ್ಯದ ಬಾಹ್ಯಾಕಾಶ ಕ್ಷೇತ್ರದ ಅಭಿವೃದ್ಧಿಗಾಗಿ ಮುಂದಿನ 5 ವರ್ಷಗಳಲ್ಲಿ 3 ಶತಕೋಟಿ ಡಾಲರ್ ಬಂಡವಾಳ ಆಕರ್ಷಿಸುವುದು ಸೇರಿದಂತೆ ಹಲವು ಅಂಶವನ್ನು ಹೇಳಲಾಗಿದೆ. ರಾಜ್ಯದ ಬಾಹ್ಯಾಕಾಶ ಕ್ಷೇತ್ರದ ಅಭಿವೃದ್ಧಿಗೆ ಹೂಡಿಕೆ ಮತ್ತು ಕೌಶಲ್ಯಾಭಿಯ ಜತೆಗೆ ಮೂಲಸೌಕರ್ಯ ಅಭಿವೃದ್ಧಿಗೂ ನೂತನ ಕರಡು ನೀತಿಯಲ್ಲಿ ಒತ್ತು ನೀಡಲಾಗಿದೆ.
ಖಾಸಗಿ-ಸಾರ್ವಜನಿಕ ಸಹಭಾಗಿತ್ಯದಲ್ಲಿ ಪರೀಕ್ಷಾ ಕೇಂದ್ರಗಳ ಸ್ಥಾಪನೆ, ಬಾಹ್ಯಾಕಾಶ ಉತ್ಪಾದನಾ ಕ್ಲಸ್ಟರ್ ಸ್ಥಾಪನೆ ಕುರಿತು ಉಲ್ಲೇಖಿಸಲಾಗಿದೆ. ಅದರೊಂದಿಗೆ ಬಾಹ್ಯಾಕಾಶ ವಲಯಕ್ಕೆ ಸಂಬಂಧಿಸಿದ ಕೈಗಾರಿಕಾ ಘಟಕಗಳನ್ನು ಒಗ್ಗೂಡಿಸುವುದು, ರಾಜ್ಯದಲ್ಲಿನ ಎಲ್ಲ ಪರೀಕ್ಷಾ ಕೇಂದ್ರಗಳನ್ನು ಒಂದೇ ಸೂರಿನಡಿ ತರುವುದಕ್ಕೆ ಸೂಕ್ತ ವ್ಯವಸ್ಥೆ ರೂಪಿಸುವ ಬಗ್ಗೆಯೂ ತಿಳಿಸಲಾಗಿದೆ. ನಾವೀನ್ಯತೆಗೆ ಒತ್ತು ನೀಡುವ ಸಲುವಾಗಿ ರಾಜ್ಯ ಸರ್ಕಾರದಿಂದ ಬಾಹ್ಯಾಕಾಶ ವಲಯಕ್ಕೆ ಸಂಬಂಧಿಸಿದ 500 ಸ್ಟಾರ್ಟ್‌ಅಪ್ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೇರ ಬೆಂಬಲ ನೀಡುವುದಾಗಿಯೂ ನೀತಿಯಲ್ಲಿ ಘೋಷಿಸಲಾಗಿದೆ.
ಇದನ್ನೂ ಓದಿ: ಗೂಗಲ್ ಮ್ಯಾಪ್ ಎಡವಟ್ಟು: ರಂಗ ಕಲಾವಿದರಿದ್ದ ಮಿನಿ ಬಸ್ ಅಪಘಾತ, ಇಬ್ಬರು ಸಾವು