ಬೆಂಗಳೂರು: ರಾಜ್ಯದಲ್ಲಿ ಆಚರಿಸಲಾಗುತ್ತಿರುವ ಬೆಳಕಿನ ಹಬ್ಬ ದೀಪಾವಳಿಯ ನಡುವೆಯೂ ಹಿಂಗಾರು ಮಳೆ ಅಬ್ಬರ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಇಂದು ಹವಾಮಾನ ಇಲಾಖೆ ಮುಂದಿನ 24 ಗಂಟೆಗಳಿಗೆ ಅನ್ವಯವಾಗುವಂತೆ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ದಕ್ಷಿಣ ಒಳನಾಡಿನ ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಎಲ್ಲೆಲ್ಲಿ ಭಾರೀ ಮಳೆ? ಮುಂದಿನ 24 ಗಂಟೆಗಳ ಕಾಲ ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಮಂಡ್ಯ, ಕೊಡಗು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಇನ್ನು ಹಾವೇರಿ, ಧಾರವಾಡ, ಬೆಳಗಾವಿ, ಬೀದರ್ ಮತ್ತು ಕಲಬುರಗಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಹಗುರ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಉತ್ತರ ಒಳನಾಡಿನ ಕೆಲ ಜಿಲ್ಲೆಗಳ ಮೇಲೆ ಶುಷ್ಕ ಹವಾಮಾನ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸಿಲಿಕಾನ್ ಸಿಟಿಯಲ್ಲಿ ಸಾಧಾರಣ ಮಳೆ: ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಕೆಲವು ಸ್ಥಳಗಳಲ್ಲಿ ಬೆಳಗಿನ ಜಾವದಲ್ಲಿ ಮಂಜು ಬೀಳುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಮತ್ತು 21 ಡಿಗ್ರಿ ದಾಖಲಾಗಲಿದೆ ಎಂದು ಹೇಳಿದೆ.
ಒಂದು ಚಂಡಮಾರುತದ ಪರಿಚಲನೆಯು ಮನ್ನಾರ್ ಗಲ್ಫ್ ಮತ್ತು ನೆರೆಹೊರೆಯ ಮೇಲೆ ಇದ್ದು, ಸರಾಸರಿ ಸಮುದ್ರ ಮಟ್ಟದಿಂದ 3.6 ಕಿಮೀ ಎತ್ತರದಲಿದೆ. ಇನ್ನೊಂದು ಚಂಡಮಾರುತವು ದಕ್ಷಿಣ ಆಂಧ್ರಪ್ರದೇಶದಿಂದ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ 3.1 ರಿಂದ 5.8 ಕಿಮೀ ಸರಾಸರಿ ಸಮುದ್ರದಲ್ಲಿ ಇದೆ. ಈ ಕಾರಣಕ್ಕೆ ಒಳನಾಡಿನಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರಿಂದಾಗಿ ಹಿಂಗಾರು ಮಳೆ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಸಕ್ರಿಯವಾಗಿದೆ. ಆಂತರಿಕ ಕರ್ನಾಟಕದ ಪ್ರತ್ಯೆಕ ಸ್ಥಳಗಳಲ್ಲಿ ಮಳೆಯಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯಲ್ಲಿ ನಿನ್ನೆಯಿಂದ ಅತಿ ಹೆಚ್ಚು (9 ಸೆಮೀ) ಮಳೆ ದಾಖಲಾಗಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎನ್.ಪುವಿಯರಸನ್ ಹೇಳಿದ್ದಾರೆ.
ಇದನ್ನೂ ಓದಿ: ಹಾವೇರಿಯಲ್ಲಿ ದೀಪಾವಳಿ ಸಂಭ್ರಮಕ್ಕೆ ಮಳೆ ಅಡ್ಡಿ: ಮನೆಗಳಿಗೆ ನುಗ್ಗಿದ ನೀರು, ಸೇತುವೆ ಮುಳುಗಡೆ