ಬೆಂಗಳೂರು: ರಾಜ್ಯದಲ್ಲಿ ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ದಿನ ಮತ್ತು ಫಲಿತಾಂಶ ದಿನಗಳಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಿರುವ ಚುನಾವಣಾ ಆಯೋಗದ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಇದೇ ವೇಳೆ, ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಆಹಾರ ಪದಾರ್ಥಗಳ ವಿತರಣೆ ಮತ್ತು ಸೇವನೆಗೆ ಅಡ್ಡಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿ ಆದೇಶಿಸಿದೆ.
ವಿಧಾನ ಪರಿಷತ್ ಚುನಾವಣೆ ನಡೆಯುವ ಮತ್ತು ಫಲಿತಾಂಶ ಪ್ರಕಟವಾಗುವ ದಿನ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಇದರ ವಿರುದ್ಧ ಮದ್ಯ ಮಾರಾಟ ಪರವಾನಗಿ ಹೊಂದಿರುವ ಕುಶಾಲ್ ರಾಜ್ ಎಂಬುವರು ಹೈಕೋರ್ಟ್ಗೆ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ನೇತೃತ್ವದ ಪೀಠವು ಅರ್ಜಿ ವಜಾಗೊಳಿಸಿದೆ. ಹೋಟೆಲ್ ಹಾಗೂ ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಆಹಾರ ಪದಾರ್ಥಗಳ ವಿತರಣೆಗೆ ಅಡ್ಡಿಪಡಿಸದಂತೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದೆ.
ಅಲ್ಲದೇ, ಚುನಾವಣಾಧಿಕಾರಿಯು ಮತದಾನದ ದಿನದಂದು ಮದ್ಯ ಮಾರಾಟ ಸೀಮಿತಗೊಳಿಸಿದ್ದರೂ, 'ಮತದಾನದ ದಿನಾಂಕ' ಎಂಬ ಪದವನ್ನು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 135 (ಸಿ)ರ ಪ್ರಕಾರ ಅರ್ಥೈಸಬೇಕಾಗುತ್ತದೆ. ಇದು ಮತದಾನದ 48 ಗಂಟೆಗಳ ಮೊದಲು ಮದ್ಯ ಮಾರಾಟ ಕಡ್ಡಾಯಗೊಳಿಸಿದೆ ಎಂದು ಪೀಠ ತಿಳಿಸಿದೆ.
ರಾಜ್ಯ ಅಬಕಾರಿ ನಿಯಮಗಳ ಅಡಿ ಶಾಂತಿಯುತ, ನ್ಯಾಯಸಮ್ಮತ ಮತ್ತು ಮುಕ್ತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ಮದ್ಯ ಮಾರಾಟ ಮಾಡುವ ಅಥವಾ ಸರಬರಾಜು ಮಾಡುವ ಯಾವುದೇ ಸಂಸ್ಥೆಯನ್ನು ಮುಚ್ಚಲು ಜಿಲ್ಲಾಧಿಕಾರಿಗಳಿಗೆ ಅಧಿಕಾರವಿದೆ ಎಂದು ನ್ಯಾಯ ಪೀಠ ತಿಳಿಸಿದೆ.
48 ಗಂಟೆ ಮದ್ಯ ಮಾರಾಟಕ್ಕೆ ನಿರ್ಬಂಧ: ಮೂರು ಪದವೀಧರ ಕ್ಷೇತ್ರಗಳು ಮತ್ತು ಮೂರು ಶಿಕ್ಷಕರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ಜೂನ್ 3ರಂದು ಚುನಾವಣೆಗಳು ನಡೆಯಲಿದೆ. ಜೂನ್ 6ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಯುವ ಬೆಂಗಳೂರು ಪದವೀಧರ ಕ್ಷೇತ್ರದ ಬಿಬಿಎಂಪಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆ ಮತ್ತು ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳನ್ನು ಒಳಗೊಂಡಂತೆ ಚುನಾವಣೆ ನಡೆಯುವ ಮತ್ತು ಫಲಿತಾಂಶ ಪ್ರಕಟವಾಗುವ ದಿನಗಳ 48 ಗಂಟೆ ಕಾಲ ಮದ್ಯ ಮಾರಾಟ ಮಾಡುವುದಕ್ಕೆ ನಿರ್ಬಂಧ ವಿಧಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಇದನ್ನೂ ಓದಿ: ವಾರಾಂತ್ಯದಲ್ಲಿ ಸಿಗಲ್ಲ ಮದ್ಯ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಾರಾಟ ನಿಷೇಧ