ಬೆಂಗಳೂರು: ವಿಧಾನಸಭಾ ಚುನಾವಣಾ ಫಲಿತಾಂಶದ ರೀತಿಯಲ್ಲೇ ಲೋಕಸಭೆಯಲ್ಲೂ ಕ್ಲೀನ್ಸ್ವೀಪ್ ಫಲಿತಾಂಶದ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ನಿರಾಶೆಯಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ತವರಲ್ಲೇ ಕಾಂಗ್ರೆಸ್ ನೆಲಕಚ್ಚಿದೆ. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ.
ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ಗೆ ಸಿಎಂ ಸಿದ್ದರಾಮಯ್ಯ ತವರಲ್ಲೇ ಹಿನ್ನಡೆಯಾಗಿದೆ. ಪಕ್ಷದ ಶಾಸಕಾಂಗ ನಾಯಕ ಸಿದ್ದರಾಮಯ್ಯ ತಮ್ಮ ಕ್ಷೇತ್ರದಲ್ಲೇ ಪಕ್ಷವನ್ನು ಗೆಲ್ಲಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಮೈಸೂರು ಅರಸರ ಎದುರು ಸರ್ಕಾರವಿದ್ದರೂ ಅಭ್ಯರ್ಥಿ ಗೆಲ್ಲಿಸಿಕೊಳ್ಳಲಾಗದೆ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ಆದರೂ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಎದುರಿಸಿದ ಚುನಾವಣೆ ಈ ಹಿಂದಿನ ಚುನಾವಣೆಗೆ ಹೋಲಿಸಿದಲ್ಲಿ ಸಮಾಧಾನಕರವಾಗಿದೆ.
25 ವರ್ಷಗಳ ಬಳಿಕ ಪುಟಿದೆದ್ದ ಕಾಂಗ್ರೆಸ್: ರಾಜ್ಯದಲ್ಲಿ 25 ವರ್ಷಗಳ ಬಳಿಕ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸನಿಹದ ಸಾಧನೆ ಮಾಡಿದೆ. 1999ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ 18 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. ನಂತರ ಒಂದಂಕಿಗೆ ತೃಪ್ತಿಪಡಬೇಕಾಯಿತು, 2004ರಲ್ಲಿ 8 ಸ್ಥಾನ ಗೆದ್ದರೆ ನಂತರ ಯುಪಿಎ ಸರ್ಕಾರ ಇದ್ದರೂ 2009ರಲ್ಲಿ ಕೇವಲ 6 ಮಾತ್ರ ಗೆದ್ದಿತು. 2014ರಲ್ಲಿ 9 ಹಾಗೂ 2019ರಲ್ಲಿ ಕೇವಲ 1 ಸ್ಥಾನ ಮಾತ್ರ ಗೆದ್ದಿತ್ತು. ಆದರೆ ಈ ಬಾರಿ ಈ ಹಿಂದಿನ ಚುನಾವಣೆಗಳಿಗೆ ಹೋಲಿಸಿದಲ್ಲಿ ಕಾಂಗ್ರೆಸ್ ಮತ್ತೆ ಹಳೆಯ ಹಳಿಗೆ ಮರಳುವ ಸೂಚನೆ ನೀಡಿದೆ.
ಸಿಎಂ ಮಾತ್ರವಲ್ಲ ಡಿಸಿಎಂ ಡಿಕೆ ಶಿವಕುಮಾರ್ ತವರಲ್ಲೂ ಕಾಂಗ್ರೆಸ್ ಸೋತಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಸ್ವತಃ ತಮ್ಮ ಸಹೋದರನೇ ಸ್ಪರ್ಧೆ ಮಾಡಿದ್ದ ತವರು ಜಿಲ್ಲೆ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಗೆಲ್ಲಲಾಗಿಲ್ಲ, ತವರಿನಲ್ಲೇ ಸೋಲುವ ಮೂಲಕ ಮುಖಭಂಗಕ್ಕೆ ಅವರು ಒಳಗಾಗಿದ್ದಾರೆ.
ಸಿಎಂ ಪಟ್ಟದ ಪ್ರಬಲ ಆಕಾಂಕ್ಷಿ ಎಂದೇ ಬಿಂಬಿತವಾದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ 2024ರ ಲೋಕಸಭಾ ಚುನಾವಣಾ ಫಲಿತಾಂಶ ಭಾರೀ ನಿರಾಸೆ ತಂದಿದೆ. 9 ಸ್ಥಾನಗಳಲ್ಲಿ ಗೆದ್ದರೂ ತಮ್ಮ ಪ್ರಾಬಲ್ಯ ಇರುವ ಕ್ಷೇತ್ರದಲ್ಲೇ ಸೋಲು ಕಂಡಿದ್ದಾರೆ. 2019ರಲ್ಲಿ ಏಕೈಕ ಕಾಂಗ್ರೆಸ್ ಸಂಸದರಾಗಿದ್ದ ಡಿ.ಕೆ.ಸುರೇಶ್ ಈ ಬಾರಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ.
ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಮೈಸೂರು ಲೋಕಸಭಾ ಕ್ಷೇತ್ರಗಳಲ್ಲಿ ಒಕ್ಕಲಿಗರ ಪ್ರಾಬಲ್ಯವಿದ್ದರೂ ಇಲ್ಲಿ ಗೆಲ್ಲಲಾಗದೆ ಇರುವುದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ಬಹದೊಡ್ಡ ಹಿನ್ನಡೆ ಎನ್ನಲಾಗುತ್ತಿದೆ.
ಕಲ್ಯಾಣ ಕರ್ನಾಟಕದಲ್ಲಿ ಕೈ ಮೇಲುಗೈ: ಸಿಎಂ, ಡಿಸಿಎಂ ತವರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಕಲಬುರಗಿಯಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಅಷ್ಟೇ ಅಲ್ಲ ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ, ರಾಯಚೂರು, ಕೊಪ್ಪಳ, ಬೀದರ್ನಲ್ಲಿ ಕಾಂಗ್ರೆಸ್ ಗೆದ್ದಿರುವುದು ಖರ್ಗೆ ನಾಯಕತ್ವಕ್ಕೆ ಬಲ ನೀಡಿದೆ. ಕಲಬುರಗಿ ಹಾಲಿ ಸಂಸದ ಬಿಜೆಪಿಯ ಉಮೇಶ್ ಜಾಧವ್ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರು ಗೆಲುವು ಸಾಧಿಸಿದ್ದಾರೆ. ಆ ಮೂಲಕ ಕಳೆದ ಚುನಾವಣೆಯಲ್ಲಿ ತಮಗಾದ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಜೊತೆಗೆ ಪಕ್ಷದಲ್ಲಿ ತಮ್ಮ ಒಲವನ್ನು ಹೆಚ್ಚಿಸಿಕೊಂಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಉಮೇಶ್ ಜಾಧವ್ ವಿರುದ್ಧ ಸೋತಿದ್ದರು. ಆದರೆ ಈ ಬಾರಿ ಕಳೆದ ಬಾರಿಯ ತಪ್ಪು ಲೆಕ್ಕಾಚಾರ ಆಗದಂತೆ ಮುನ್ನೆಚ್ಚರಿಕೆ ವಹಿಸಿ ಬಾಬೂರಾವ್ ಚಿಂತನಸೂರ್ ಸೇರಿದಂತೆ ಪ್ರಬಲ ನಾಯಕರ ಮರಳಿ ಸೆಳೆದು ಪಕ್ಷಕ್ಕೆ ಭದ್ರ ನೆಲೆ ಕಲ್ಪಿಸಿದ್ದರು. ಪರಿಣಾಮ ಉಮೇಶ್ ಜಾಧವ್ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಬಲ ಹೆಚ್ಚಾದಂತಾಗಿದೆ.
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರೂ ಆಗಿದ್ದು, ಸ್ಥಳೀಯವಾಗಿ ಹಿಡಿತ ಸಾಧಿಸಲು ಅಳಿಯನ ಗೆಲುವು ನಿರ್ಣಾಯಕವಾಗಿತ್ತು. ರಾಜ್ಯದಲ್ಲಿ ಪ್ರಿಯಾಂಕ್ ಖರ್ಗೆ ಇನ್ನಷ್ಟು ಬಲಿಷ್ಠವಾಗಲು ಈ ಗೆಲುವು ಸಹಕಾರಿ ಆಗುತ್ತಿತ್ತು. ಹಾಗಾಗಿ, ಪ್ರಸಕ್ತ ಲೋಕಸಭೆ ಚುನಾವಣೆಯಲು ಖರ್ಗೆ ಕುಟುಂಬಕ್ಕೆ ಪ್ರತಿಷ್ಠೆಯ ಕಣವಾಗಿತ್ತು. ಇದರಲ್ಲಿ ಖರ್ಗೆ ಕುಟುಂಬ ಯಶಸ್ವಿಯಾಗಿದೆ ಎನ್ನಬಹುದು.
ಇದನ್ನೂ ಓದಿ: ಲೋಕಸಭಾ ಚುನಾವಣೆ: ರಾಜ್ಯದ 6 ಸಚಿವರ ಮಕ್ಕಳಲ್ಲಿ ಮೂವರಿಗೆ ಸಿಹಿ, ಮೂವರಿಗೆ ಕಹಿ - MINISTERS KINS