ಬೆಂಗಳೂರು: ರಾಜ್ಯದಲ್ಲಿ ಹಗರಣ ಸ್ವರೂಪ ಪಡೆದುಕೊಂಡಿರುವ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಅವ್ಯವಹಾರ ಹಾಗೂ ನಿಗಮದ ಲೆಕ್ಕಾಧಿಕಾರಿಯಾಗಿದ್ದ ಚಂದ್ರಶೇಖರನ್ ಆತ್ಮಹತ್ಯೆ ಸಂಬಂಧ ಸಮಗ್ರ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಒಂದು ವರ್ಷದಲ್ಲಿ ಪ್ರತ್ಯೇಕ ಮೂರು ಅಪರಾಧ ಪ್ರಕರಣಗಳಲ್ಲಿ ಮೂರನೇ ಎಸ್ಐಟಿ ನಿಯೋಜಿಸದಂತಾಗಿದೆ. ಬಿಟ್ ಕಾಯಿನ್ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಹಾಗೂ ಇದೀಗ ವಾಲ್ಮೀಕಿ ನಿಗಮ ಲೆಕ್ಕಾಧಿಕಾರಿ ಸಾವು ಹಾಗೂ ಬಹುಕೋಟಿ ದುರ್ಬಳಕೆ ಆರೋಪ ಹಿನ್ನೆಲೆಯಲ್ಲಿ ಇಂದು ವಿಶೇಷ ತನಿಖಾ ತಂಡ ರಚಿಸಲಾಗಿದೆ.
ಸಿಐಡಿ ಆರ್ಥಿಕ ಅಪರಾಧ ವಿಭಾಗದ ಎಡಿಜಿಪಿ ಮನೀಶ್ ಕರ್ಬೀಕರ್ ನೇತೃತ್ವದಲ್ಲಿ ಎಸ್ಐಟಿ ರಚನೆಯಾಗಿದೆ. ನಗರ ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್, ಬೆಂಗಳೂರು ನಗರ ಗುಪ್ತವಾರ್ತೆಯ ಎಸ್ಪಿ ಹರಿರಾಮ್, ಸಿಐಡಿ ಪೊಲೀಸ್ ಅಧೀಕ್ಷಕ ರಾಘವೇಂದ್ರ ಕೆ.ಹೆಗಡೆ ಅವರನ್ನು ಈ ತನಿಖಾ ತಂಡ ಒಳಗೊಂಡಿದೆ. ತಂಡಕ್ಕೆ ಅಗತ್ಯಬಿದ್ದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಿಕೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಆರ್ಥಿಕ ಅವ್ಯವಹಾರಗಳು, ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣ, ಹಣ ದುರ್ಬಳಕೆ ಆರೋಪ ಸಂಬಂಧ ಯೂನಿಯನ್ ಬ್ಯಾಂಕ್ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸೇರಿದಂತೆ ಇದೇ ವಿಚಾರವಾಗಿ ಬೇರೆ,ಬೇರೆ ಠಾಣೆಗಳಲ್ಲಿ ಕೇಸ್ ದಾಖಲಾಗಿದ್ದರೆ ಪ್ರಕರಣಗಳನ್ನ ವರ್ಗಾಯಿಸಿಕೊಂಡು ಸಮಗ್ರ ತನಿಖೆ ನಡೆಸಿ ಶೀಘ್ರದಲ್ಲಿ ವರದಿ ಸಲ್ಲಿಸಬೇಕು. ಇದರ ಮೇಲ್ವಿಚಾರಣೆಯನ್ನ ಸಿಐಡಿ ಡಿಜಿಪಿ ನಡೆಸಲಿದ್ದು, ಸಿಐಡಿಯಲ್ಲಿ ಲಭ್ಯವಿರುವ ಮಾನವ ಸಂಪನ್ಮೂಲ ಬಳಸಿಕೊಂಡು ತನಿಖೆ ನಡೆಸಬೇಕೆಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಸಾಮಾಜಿಕ ಜಾಲತಾಣದ 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ''ಶಿವಮೊಗ್ಗ ಜಿಲ್ಲೆಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕರಾದ ಚಂದ್ರಶೇಖರ್ ಅವರ ಆತ್ಮಹತ್ಯೆ ಪ್ರಕರಣ ಹಾಗೂ ನಿಗಮದಲ್ಲಿ ನಡೆದಿರುವ ಆರ್ಥಿಕ ಅವ್ಯವಹಾರಗಳ ಗಂಭೀರತೆಯನ್ನು ಪರಿಗಣಿಸಿ, ಸಮಗ್ರ ತನಿಖೆ ಕೈಗೊಳ್ಳಲು ತಾಂತ್ರಿಕ ಪರಿಣಿತಿ ಇರುವ ರಾಜ್ಯದ ವಿಶೇಷ ತನಿಖಾ ಸಂಸ್ಥೆಯಾದ ಸಿಐಡಿಯ ಒಂದು ವಿಶೇಷ ತನಿಖಾ ತಂಡ ರಚಿಸಿ, ಅದರ ಮೂಲಕ ತನಿಖೆ ನಡೆಸಲು ನಮ್ಮ ಸರ್ಕಾರವು ನಿರ್ಧರಿಸಿದೆ'' ಎಂದು ಸಿಎಂ ಬರೆದುಕೊಂಡಿದ್ದಾರೆ.
ಈಗಾಗಲೇ ಎಂಡಿ, ಲೆಕ್ಕಾಧಿಕಾರಿ ಅಮಾನತು: ಶಿವಮೊಗ್ಗದಲ್ಲಿ ವಾಲ್ಮಿಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಭ್ರಷ್ಟಾಚಾರವನ್ನು ಪ್ರಸ್ತಾಪಿಸಿ ನಿಗಮದ ಮೇಲಾಧಿಕಾರಿಗಳ ಹೆಸರು ಹಾಗೂ ಮಂತ್ರಿ ಎಂದು ಉಲ್ಲೇಖಿಸಿ ಡೆತ್ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣ ರಾಜಕೀಯವಾಗಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರರನ್ನು ಸಂಪುಟದಿಂದ ಕೈ ಬಿಡುವಂತೆ ಪ್ರತಿಪಕ್ಷಗಳು ಆಗ್ರಹಿಸುತ್ತಿವೆ. ಇದೀಗ ರಾಜ್ಯ ಸರ್ಕಾರ ನಿಗಮದಲ್ಲಿನ ಅವ್ಯವಹಾರದ ಆರೋಪ ಹಿನ್ನೆಲೆ ಎಂಡಿ ಹಾಗೂ ಲೆಕ್ಕಾಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದೆ.
ಆರು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಎಫ್ಐಆರ್: ಈ ಪ್ರಕರಣವನ್ನು ರಾಜ್ಯ ಸರ್ಕಾರ CID ತನಿಖೆಗೆ ವಹಿಸಿದ್ದು, ಶಿವಮೊಗ್ಗ ಮತ್ತು ಬೆಂಗಳೂರು ವಿಭಾಗದ CID ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸರ್ಕಾರದ ಪೂರ್ವ ಅನುಮತಿ ಪಡೆದು ಬ್ಯಾಂಕ್ ಅಧಿಕಾರಿಗಳ ವಿರುದ್ಧ FIR ದಾಖಲಿಸಲಾಗಿದೆ. ಬ್ಯಾಂಕ್ ಎಂಡಿ ಮತ್ತು ಸಿಇಒ ಹಾಗೂ ಎಲ್ಲಾ ನಿರ್ದೇಶಕರ ಮೇಲೆ FIR ಈಗಾಗಲೇ ದಾಖಲಾಗಿದೆ. ಒಟ್ಟು 6 ಮಂದಿ ಬ್ಯಾಂಕ್ ಅಧಿಕಾರಿಗಳ ಮೇಲೆ FIR ದಾಖಲಾಗಿದೆ.
ಸಿಐಡಿಯಿಂದ ನಡೆಯುತ್ತಿದ್ದ ತನಿಖೆ: ಆತ್ಮಹತ್ಯೆ ಮಾಡಿಕೊಂಡಿರುವ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಮನೆಗೆ ಸಿಐಡಿ ಅಧಿಕಾರಿಗಳ ತಂಡ ಇಂದು ಸಂಜೆ ಭೇಟಿ ನೀಡಿದೆ. ಶಿವಮೊಗ್ಗದ ಕೆಂಚಪ್ಪ ಬಡಾವಣೆಯ ಎರಡನೇ ತಿರುವಿನಲ್ಲಿ ಇರುವ ಚಂದ್ರಶೇಖರ್ ಅವರ ಮನೆಗೆ ಸಿಐಡಿಯ ಆರ್ಥಿಕ ಅಪರಾಧ ವಿಭಾಗದ ಡಿವೈಎಸ್ಪಿ ಮೊಹಮ್ಮದ್ ರಫಿ ಅವರ ನೇತೃತ್ವದಲ್ಲಿ ಒಟ್ಟು 6 ಜನರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಸಿಐಡಿ ತಂಡ ಸುಮಾರು 50 ನಿಮಿಷಗಳ ಕಾಲ ಮನೆಯಲ್ಲಿ ಶೋಧ ನಡೆಸಿದೆ.
ಸಚಿವ ನಾಗೇಂದ್ರ ಅವರಿಂದ ಒಂದು ವಾರದೊಳಗೆ ರಾಜೀನಾಮೆ ಪಡೆಯಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಿಎಂಗೆ ಒತ್ತಾಯಿಸಿದ್ದಾರೆ.
ಸಿಬಿಐ ತನಿಖೆಗೆ ಒತ್ತಾಯಿಸಿದ ರಾಜ್ಯ ಬಿಜೆಪಿ: ಆತ್ಮಹತ್ಯೆ ಮಾಡಿಕೊಂಡ ಎಸ್ಸಿ-ಎಸ್ಟಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಅವರ ಮನೆಗೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಬಳಿಕ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಚಂದ್ರಶೇಖರನ್ ಪ್ರಕರಣದಲ್ಲಿ ಭಂಡತನ ಬಿಟ್ಟು ಸಚಿವರ ರಾಜೀನಾಮೆ ಪಡೆಯಬೇಕು, ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವಾಗಲೂ ಭಂಡತನ ಪ್ರದರ್ಶಿಸುತ್ತಾರೆ. ಈ ಪ್ರಕರಣದಲ್ಲಿ ಭಂಡತನ ಪ್ರದರ್ಶಿಸಬಾರದು. ಒಂದು ವಾರದ ಗಡುವು ನೀಡುತ್ತಿದ್ದೇವೆ, ಸಚಿವರ ರಾಜೀನಾಮೆ ಪಡೆದು ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಮಾಜಿ ಸಚಿವ ಸಿಟಿ ರವಿ, "ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಹಗರಣ ಆರೋಪ ಪ್ರಕರಣ ಸಂಬಂಧ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು. ಹಣ ವರ್ಗಾವಣೆ ಕುರಿತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಿಬಿಐಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಕೂಡಲೇ ಪ್ರಕರಣವನ್ನು ಸಿಬಿಐಗೆ ವಹಿಸಬೇಕು" ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಕೋರ್ಟ್ಗೆ ಪ್ರಜ್ವಲ್ ರೇವಣ್ಣ ಹಾಜರು: ವಕೀಲರ ವಾದ - ಪ್ರತಿವಾದ ಹೇಗಿತ್ತು?