ಬೆಂಗಳೂರು: ರಾಜ್ಯ ಸರ್ಕಾರವು ತನ್ನದೇ ವ್ಯಾಪ್ತಿಯ ವಿವಿಧ ಇಲಾಖೆ ಮತ್ತು ಉದ್ಯಮಗಳಿಗೆ ನೀಡಿದ ಸಾಲವನ್ನು ವಸೂಲಿ ಮಾಡುವಲ್ಲಿ ವಿಫಲವಾಗಿದ್ದು, 10 ಸಾವಿರ ಕೋಟಿ ರೂ.ನಷ್ಟು ಸಾಲ ವಸೂಲಿ ಮಾಡಿಲ್ಲ ಎಂದು ಮಹಾಲೆಕ್ಕಪರಿಶೋಧಕರ ವರದಿ (ಸಿಎಜಿ) ತಿಳಿಸಿದೆ. ವಿಧಾನಸಭೆಯಲ್ಲಿಂದು ಮುಖ್ಯಮಂತ್ರಿಗಳ ಪರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು 2022-23ನೇ ಹಣಕಾಸು ವರ್ಷದ ಹಣಕಾಸು ಖಾತೆಗಳ ಸಿಎಜಿ ವರದಿ ಮಂಡಿಸಿದರು.
ವಿವಿಧ ಇಲಾಖೆಗಳ ಮತ್ತು ಉದ್ಯಮಗಳಿಂದ 10 ಸಾವಿರ ಕೋಟಿ ರೂ. ನಷ್ಟು ಸಾಲ ವಸೂಲಿ ಮಾಡಬೇಕಿದೆ. ಈ ಪೈಕಿ 1977ರಿಂದಲೂ ಹಲವು ಇಲಾಖೆಗಳು ಅಸಲನ್ನೇ ನೀಡಿಲ್ಲ ಎಂದು ಉಲ್ಲೇಖಿಸಲಾಗಿದೆ. ಎಂಟು ಇಲಾಖೆಗಳನ್ನು (21 ಸಾಲ ಪಡೆದ ಘಟಕಗಳು) ಒಳಗೊಂಡಿರುವ 10,380 ಕೋಟಿ ರೂ.ಗಳಷ್ಟು ಹಳೆಯ ಸಾಲಗಳಿಗೆ ಸಂಬಂಧಿಸಿದಂತೆ ಕಳೆದ ಹಲವಾರು ವರ್ಷಗಳಲ್ಲಿ ಅಸಲು ವಸೂಲಾತಿ ಮಾಡಲಾಗಿಲ್ಲ, ಇದರಲ್ಲಿ 1977 ರಿಂದ ಬಾಕಿ ಉಳಿದಿರುವ ಸಾಲಗಳು ಸೇರಿವೆ. ಸರ್ಕಾರಕ್ಕೆ 10,380 ಕೋಟಿ ರೂ. ಸಾಲ ವಸೂಲಿಯಾಗಬೇಕಿದೆ. ಸಾಲ ವಸೂಲಿ ಬಾಕಿ ಇದ್ದು, ವಿವಿಧ ಇಲಾಖೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಬರಬೇಕಿದೆ ಎಂದು ವರದಿ ತಿಳಿಸಿದೆ.
ಹೆಚ್ಚಿನವು ಸರ್ಕಾರಿ ಸ್ವಾಮ್ಯದ ಉದ್ಯಮಗಳು, 15,856 ಕೋಟಿರು. ಬಾಕಿಯನ್ನು ಹೊಂದಿವೆ, ಇದರಲ್ಲಿ 9,380 ಕೋಟಿ ರೂ. 1977 ರಿಂದ ಬಿಡಬ್ಲ್ಯೂಎಸ್‌ಎಸ್‌ಬಿ ಮತ್ತು ಕರ್ನಾಟಕ ಸ್ಟೇಟ್ ಸೀಡ್ಸ್ ಕಾರ್ಪೊರೇಷನ್ ಲಿಮಿಟೆಡ್‌ಗೆ ನೀಡಿದ ಸಾಲಗಳಿಗೆ ಸಂಬಂಧಿಸಿದ್ದಾಗಿದೆ. ಎಲೆಕ್ಟ್ರೋ ಮೊಬೈಲ್ ಇಂಡಿಯಾ ಲಿಮಿಟೆಡ್ (3.63 ಕೋಟಿ ರೂ) ಮತ್ತು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (5.24 ಕೋಟಿ ರೂ) 1981 ರಿಂದ ಬಾಕಿಯನ್ನು ಹೊಂದಿವೆ ಎಂದು ಹೇಳಿದೆ.
ಬಾಕಿಗಳು: 29,509.54 ಕೋಟಿ ರೂ. ಖರ್ಚು ಮಾಡದೆ 85 ಪಿಡಿ ಖಾತೆಗಳಿವೆ ಎಂಬುದನ್ನೂ ಸಹ ಸಿಎಜಿ ಗಮನಿಸಿದೆ. 2022-23ರಲ್ಲಿ 32,201.44 ಕೋಟಿ ರೂ. ಪಿಡಿ ಖಾತೆಗಳಿಗೆ ವರ್ಗಾಯಿಸಲಾಗಿದೆ. ಅದೇ ರೀತಿ, ಕೇಂದ್ರದ ಪ್ರಾಯೋಜಿತ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ಖಾತೆಗಳಲ್ಲಿ 12,925.31 ಕೋಟಿ ರೂ. ಖರ್ಚು ಮಾಡಿಲ್ಲ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಲೋಕಾಯುಕ್ತದಲ್ಲಿ ಎಫ್ಐಆರ್: 'ಕಾನೂನು ಹೋರಾಟ ಮುಂದುವರಿಸುವೆ'- ಡಿಕೆಶಿ