ಬೆಂಗಳೂರು: ಪೊಲೀಸ್ ವಶದಲ್ಲಿರುವ ಆರೋಪಿಗಳ ಪ್ರತಿನಿತ್ಯದ ಆಹಾರ ಭತ್ಯೆಯನ್ನು 75 ರೂ.ಗಳಿಂದ 150 ರೂ.ಗೆ ಏರಿಕೆ ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಪೊಲೀಸರು ಕಳ್ಳತನ, ಸುಲಿಗೆ ಸೇರಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಬಂಧಿಸುತ್ತಿದ್ದ ಆರೋಪಿಗಳನ್ನು ಕೋರ್ಟ್ ಅನುಮತಿ ಪಡೆದು ಪೊಲೀಸ್ ಕಸ್ಟಡಿಗೆ ಪಡೆಯುತ್ತಾರೆ. ಅಂತಹ ಆರೋಪಿಗಳ ನಿತ್ಯದ ಆಹಾರ ಭತ್ಯೆಗೆ 75 ರೂ.ಗಳನ್ನು ಇಲಾಖೆ ನೀಡುತ್ತಿತ್ತು. ಅದನ್ನೂ ಈಗ ಹೆಚ್ಚಳ ಮಾಡಲಾಗಿದೆ.
ಇತ್ತೀಚೆಗೆ ತರಕಾರಿ ಹಾಗೂ ಇತರ ಆಹಾರ ಪದಾರ್ಥಗಳ ದರಗಳು ದುಬಾರಿಯಾಗಿರುವ ಹಿನ್ನೆಲೆಯಲ್ಲಿ 75 ರೂ. ವೆಚ್ಚದಲ್ಲಿ ಆರೋಪಿಗಳಿಗೆ ಆಹಾರ ಒದಗಿಸುವುದು ಕಷ್ಟಕರವಾಗಿದೆ. ಠಾಣಾಧಿಕಾರಿಗಳೇ ತಮ್ಮ ಸ್ವಂತ ಹಣದಿಂದ ಈ ವೆಚ್ಚವನ್ನು ಭರಿಸುತ್ತಿದ್ದಾರೆ. ಜೊತೆಗೆ, ಪ್ರಕರಣವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಕು ಉಂಟಾಗಿರುವುದರಿಂದ ಪೊಲೀಸ್ ವಶದಲ್ಲಿರುವ ಆರೋಪಿಗಳಿಗೆ ಪೌಷ್ಠಿಕಾಂಶಯುಕ್ತ ಆಹಾರವನ್ನು ಒದಗಿಸಬೇಕಾಗಿದೆ. ಹೀಗಾಗಿ, 75 ರೂ.ಗಳಿಂದ 300 ರೂ.ಗಳಿಗೆ ಹೆಚ್ಚಿಸಬೇಕೆಂದು ಕಳೆದ ವರ್ಷ ಸರ್ಕಾರಕ್ಕೆ ಪೊಲೀಸ್ ಇಲಾಖೆಯಿಂದ ಪತ್ರ ಬರೆಯಲಾಗಿತ್ತು.
ಇದೀಗ, ಸರ್ಕಾರದ ಸೂಚನೆ ಮೇರೆಗೆ 75 ರೂ.ಗಳಿಂದ 150 ರೂ.ಗೆ ಆರೋಪಿಗಳ ಆಹಾರ ಭತ್ಯೆಯನ್ನು ಹೆಚ್ಚಳ ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಇದನ್ನೂ ಓದಿ: ದರ್ಶನ್‌ಗೆ ವಿಶೇಷ ಸೌಲಭ್ಯ ನೀಡಿದ್ದ ಜೈಲು ಅಧೀಕ್ಷಕ ಮಲ್ಲಿಕಾರ್ಜುನ ಸ್ವಾಮಿ ಅಮಾನತು ಎತ್ತಿಹಿಡಿದ ಕೆಎಟಿ