ಬೆಂಗಳೂರು: ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ಕ್ಷೇತ್ರಗಳ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಮೂರೂ ಪಕ್ಷಗಳಲ್ಲೂ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭಗೊಂಡಿದ್ದು, ಮಿನಿ ಸಮರದಲ್ಲಿ ಗೆಲುವು ಸಾಧಿಸಲು ನಾನಾ ರೀತಿಯ ತಂತ್ರಗಾರಿಕೆಗಳನ್ನು ಹೆಣೆಯುತ್ತಿದ್ದಾರೆ.
ಈ ಮೂರು ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಸ್ಪರ್ಧಿಸಲಿದೆ. ಎನ್‌ಡಿಎ ಮಿತ್ರಪಕ್ಷಗಳ ಪೈಕಿ ಬಿಜೆಪಿ 2 ಹಾಗೂ ಜೆಡಿಎಸ್ 1 ಕ್ಷೇತ್ರದಲ್ಲಿ ಹುರಿಯಾಳುಗಳನ್ನು ಕಣಕ್ಕಿಳಿಸುವ ನಿರೀಕ್ಷೆಯಿದೆ. ಈ ನಡುವೆ ಉಪಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಲು ಆಕಾಂಕ್ಷಿಗಳು ಭಾರಿ ಕಸರತ್ತು ನಡೆಸುತ್ತಿದ್ದಾರೆ.
ಚನ್ನಪಟ್ಟಣಕ್ಕಾಗಿ ಜೆಡಿಎಸ್ ಜಿದ್ದು: ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಳ್ಳಲು ಜೆಡಿಎಸ್ ಜಿದ್ದಿಗೆ ಬಿದ್ದಿದೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಭವಿಷ್ಯ ರೂಪಿಸಲು ಮತ್ತೊಂದು ಪ್ರಯತ್ನ ಆರಂಭಿಸಿದ್ದಾರೆ. ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಕೂಡ ಪಟ್ಟು ಸಡಿಲಿಸದಿರುವುದು ಮೈತ್ರಿಯಲ್ಲಿ ಬಿಕ್ಕಟ್ಟು ಮೂಡಿಸಿದೆ. ಇದರಿಂದಾಗಿ ಚನ್ನಪಟ್ಟಣ ಹೈ ವೋಲ್ಟೇಜ್ ಅಖಾಡವಾಗಿದೆ.
ಜೆಡಿಎಸ್ ಮತ್ತು ಬಿಜೆಪಿ ನಡುವೆ ಈವರೆಗೂ ಸ್ಥಾನ ಹಂಚಿಕೆ ಬಗ್ಗೆ ಅಧಿಕೃತ ಘೋಷಣೆಗಳಾಗಿಲ್ಲ. ತೆರೆಮರೆಯಲ್ಲಿ ಸಾಕಷ್ಟು ಚರ್ಚೆಗಳು, ತಯಾರಿಗಳು ನಡೆಯುತ್ತಲೇ ಇವೆ. ಕಾಂಗ್ರೆಸ್‌ಗೆ ಸೋಲುಣಿಸಲು ಎರಡೂ ಪಕ್ಷಗಳು ಜಂಟಿ ಹೋರಾಟ ಅನಿವಾರ್ಯ ಎಂಬ ಪರಿಸ್ಥಿತಿ ಇದೆ.
"ಉಪ ಚುನಾವಣೆ ಸಂಬಂಧ ಮುಂದೆ ಚರ್ಚೆ ಮಾಡೋಣ. ಬಿಡದಿ ತೋಟದಲ್ಲಿ ಇಂದು ಸಂಜೆ ಚನ್ನಪಟ್ಟಣ ಕಾರ್ಯಕರ್ತರು ಹಾಗೂ ನಾಯಕರ ಸಭೆ ಕರೆದಿದ್ದೇನೆ. ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು ಅಷ್ಟೇ" ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಶಿಗ್ಗಾಂವಿ ಕ್ಷೇತ್ರ: ಮಾಜಿ ಸಿಎಂ ಬಸವರಾಜ ಬೊಮಾಯಿ ರಾಜೀನಾಮೆಯಿಂದ ತೆರವಾದ ಶಿಗ್ಗಾಂವಿ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ರಣತಂತ್ರ ಹೆಣೆಯುತ್ತಿದೆ. ಆದರೆ ಇಲ್ಲಿ ಕಾಂಗ್ರೆಸ್‌ನಲ್ಲಿ ಸಮರ್ಥ ಹುರಿಯಾಳುಗಳ ಕೊರತೆಯಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ 13 ಹಾಗೂ ಬಿಜೆಪಿಯಲ್ಲಿ 57 ಆಕಾಂಕ್ಷಿಗಳು ಈಗಾಗಲೇ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಎರಡೂ ಪಕ್ಷದಲ್ಲಿ ತಲಾ ನಾಲ್ಕೈದು ಹೆಸರು ಮುಂಚೂಣಿಯಲ್ಲಿವೆ. ಹೀಗಾಗಿ ಅಂತಿಮವಾಗಿ ಟಿಕೆಟ್ ಪಡೆಯುವವರಾರು? ಎಂಬ ಕುತೂಹಲ ಮೂಡಿದೆ. ಲಿಂಗಾಯತರು ಹಾಗೂ ಅಲ್ಪಸಂಖ್ಯಾತರು ನಿರ್ಣಾಯಕರಾಗಿರುವ ಕ್ಷೇತ್ರದಲ್ಲಿ ಜಾತಿ ಪಾಲಿಟಿಕ್ಸ್ ಜೋರಾಗಿದೆ. ಬಿಜೆಪಿಯಲ್ಲಿ ಸ್ಥಳೀಯರು ಅಥವಾ ಹೊರಗಿನವರಿಗೆ ಟಿಕೆಟ್ ಕೊಡಬೇಕೇ? ಪಂಚಮಸಾಲಿಯವರಿಗೆ ಕೊಡಬೇಕೇ? ಎಂಬ ಚರ್ಚೆಗಳು ನಡೆದಿವೆ.
"ಶಿಗ್ಗಾಂವಿ ಚುನಾವಣೆಗೆ ತಯಾರಿ ಮಾಡಿರುವ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಿದ್ದೇನೆ. ಎಲ್ಲ ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಹೇಳಿದ್ದೇನೆ. ಅಭ್ಯರ್ಥಿ ಆಯ್ಕೆ ಬಗ್ಗೆಯೂ ಚರ್ಚೆ ಆಗಿದೆ. ಅಂತಿಮವಾಗಿ ಯಾರಿಗೇ ಟಿಕೆಟ್ ಕೊಟ್ಟರೂ ಗೆಲ್ಲಿಸಬೇಕು ಅಂತ ಆಗಿದೆ. ದೆಹಲಿಗೆ ಅಕ್ಟೋಬರ್ 19ರ ನಂತರ ಹೋಗುತ್ತೇನೆ " ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಂಡೂರು ಕ್ಷೇತ್ರ: ಇನ್ನು ಕಾಂಗ್ರೆಸ್ನ ಈ.ತುಕಾರಂ ರಾಜೀನಾಮೆಯಿಂದ ತೆರವಾದ ಸಂಡೂರು ಎಸ್ಟಿ ಮೀಸಲಾತಿ ಕ್ಷೇತ್ರವಾಗಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಕಳೆದ ನಾಲ್ಕು ಚುನಾವಣೆಗಳಿಂದ ಕಾಂಗ್ರೆಸ್ ಭದ್ರಕೋಟೆಯಾಗಿರುವ ಕ್ಷೇತ್ರದಲ್ಲಿ ಕಮಲ ಅರಳಿಸಲು ಬಿಜೆಪಿ ನಾಯಕರು ಕಸರತ್ತು ನಡೆಸಿದ್ದಾರೆ.
ಆಕಾಂಕ್ಷಿಗಳು ಯಾರು? ತುಕಾರಾಂ ಈ ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಕಾಂಗ್ರೆಸ್‌ನಿಂದ ಗೆದ್ದಿದ್ದರು. ಜಿ.ಜನಾರ್ದನ ರೆಡ್ಡಿ ಹಾಗೂ ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಸಹೋದರರು ಮುನಿಸು ಬಿಟ್ಟು ಇದೀಗ ಒಂದೇ ವೇದಿಕೆ ಮೇಲೆ ಕಾಣಿಸಿಕೊಳ್ಳುವ ಮೂಲಕ ಬಿಜೆಪಿ ಪಾಳಯದ ಬಲ ಹೆಚ್ಚಿಸಿದ್ದಾರೆ. ಬಿಜೆಪಿಯಿಂದ ಕೆ.ಎಸ್.ದಿವಾಕರ್, ಮಾಜಿ ಸಂಸದ ದೇವೇಂದ್ರಪ್ಪ, ಅವರ ಪುತ್ರ ಅಣ್ಣಪ್ಪ, ರಾಮಕೃಷ್ಣ, ಬಂಗಾರು ಹನುಮಂತು, ಶಿಲ್ಪಾ ರಾಘವೇಂದ್ರ ಆಕಾಂಕ್ಷಿಗಳಾಗಿದ್ದಾರೆ. ಇನ್ನೊಂದೆಡೆ ಶ್ರೀರಾಮುಲು ಕೂಡ ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮತದಾರರ ಸಂಖ್ಯೆ ಎಷ್ಟು?:
ಮತದಾರರು | ಚನ್ನಪಟ್ಟಣ | ಶಿಗ್ಗಾಂವಿ | ಸಂಡೂರು |
ಪುರುಷ | 1,12,271 | 1,21,067 | 1,17,739 |
ಮಹಿಳೆ | 1,20,557 | 1,15,717 | 1,18,279 |
ತೃತೀಯ ಲಿಂಗಿ | 8 | 6 | 29 |
ಒಟ್ಟು ಮತದಾರರು | 2,32,836 | 2,36,790 | 2,36,047 |
ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ: ಡಿಕೆ ಸುರೇಶ್ ಹೆಸರಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಾಲಯದಲ್ಲಿ ಚಂಡಿಕಾಯಾಗ