ಡಿಸಿಸಿ, ಪಿಕಾರ್ಡ್ ಬ್ಯಾಂಕ್ಗಳ ಸುಸ್ತಿಸಾಲ ಬಡ್ಡಿ ಮನ್ನಾ; ಡಿಸಿಸಿ ಬ್ಯಾಂಕುಗಳ ಬಾಕಿ ಬಿಡುಗಡೆಗೆ ನಿರ್ಧಾರ - ಸಹಕಾರ ಇಲಾಖೆ
ಡಿಸಿಸಿ ಮತ್ತು ಪಿಕಾರ್ಡ್ ಬ್ಯಾಂಕುಗಳ ಮಧ್ಯಮಾವಧಿ ಮತ್ತು ದೀರ್ಘಾವಧಿ ಸುಸ್ತಿ ಸಾಲಗಳ ಬಡ್ಡಿ ಮನ್ನಾ ಸೇರಿದಂತೆ ಸಹಕಾರ ವಲಯಕ್ಕೆ ಕೆಲವೊಂದು ಯೋಜನೆಗಳನ್ನು ಇಂದಿನ ರಾಜ್ಯ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ.
DCC Picard banks waive interest on bad loans
Published : Feb 16, 2024, 3:05 PM IST
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಮಂಡಿಸಿದ ಬಜೆಟ್ನಲ್ಲಿ ಸಹಕಾರ ವಲಯಕ್ಕೆ ಕೆಲವು ಕೊಡುಗೆಗಳನ್ನು ನೀಡಿದ್ದಾರೆ. ಬಡ್ಡಿರಹಿತ ಅಲ್ಪಾವಧಿ ಸಾಲದ ಮಿತಿಯನ್ನು ಹೆಚ್ಚಿಸುವುದು, ರೈತರಿಗೆ ನೀಡಲಾಗುವ ಸಾಲದ ಪ್ರಮಾಣ ಹೆಚ್ಚಿಸುವುದು, ಡಿಸಿಸಿ ಬ್ಯಾಂಕ್ಗಳ ಬಾಕಿ ಮೊತ್ತ ಬಿಡುಗಡೆ ಮಾಡುವ ಕುರಿತಂತೆ ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ್ದಾರೆ. ಒಟ್ಟಾರೆಯಾಗಿ ಸಹಕಾರ ವಲಯಕ್ಕೆ ಇಂದಿನ ಬಜೆಟ್ನಲ್ಲಿ ಘೋಷಿಸಲಾದ ಯೋಜನೆಗಳು ಹಾಗೂ ಅನುದಾನದ ವಿವರ ಹೀಗಿದೆ..
- 2023-24ನೇ ಸಾಲಿನಲ್ಲಿ ಬಡ್ಡಿರಹಿತ ಅಲ್ಪಾವಧಿ ಸಾಲವನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗಳಿಗೆ ಹಾಗೂ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲವನ್ನು ಶೇಕಡಾ 3ರ ಬಡ್ಡಿ ದರದಲ್ಲಿ 10 ಲಕ್ಷ ರೂ.ನಿಂದ 15 ಲಕ್ಷ ರೂ.ಗಳಿಗೆ ಏರಿಸುವ ಮಹತ್ತರ ನಿರ್ಧಾರ.
- ಪ್ರಸಕ್ತ ಸಾಲಿನಲ್ಲಿ ರಾಜ್ಯದ 36 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ದಾಖಲೆಯ 27,000 ಕೋಟಿ ರೂ.ಗಳಷ್ಟು ಸಾಲ ವಿತರಿಸುವ ಗುರಿ.
- ಸಹಕಾರಿ ಬ್ಯಾಂಕುಗಳ ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಕ್ರಮ.
- ಸರ್ಕಾರದ ಹಿಂದಿನ ಅವಧಿಯಲ್ಲಿ 50,000 ರೂ. ವರೆಗಿನ ರೈತರ ಬೆಳೆ ಸಾಲ ಮನ್ನಾ ಯೋಜನೆಯಡಿ 21 ಲಕ್ಷ ರೈತರಿಗೆ 7,631 ಕೋಟಿ ರೂ. ಬೆಳೆ ಸಾಲ ಮನ್ನಾ ಮಾಡಲಾಗಿತ್ತು.
- ಡಿಸಿಸಿ ಬ್ಯಾಂಕುಗಳಿಗೆ ಬಾಕಿ ಇರುವ 132 ಕೋಟಿ ರೂ. ಮೊತ್ತ ಬಿಡುಗಡೆ ಮಾಡಲು ನಿರ್ಧಾರ.
- ಡಿಸಿಸಿ ಮತ್ತು ಪಿಕಾರ್ಡ್ ಬ್ಯಾಂಕುಗಳ ಮಧ್ಯಮಾವಧಿ ಮತ್ತು ದೀರ್ಘಾವಧಿ ಸುಸ್ತಿ ಸಾಲಗಳ ಬಡ್ಡಿ ಮನ್ನಾ ಮಾಡಲು ತೀರ್ಮಾನ. ಇದರಿಂದ ಸುಮಾರು 57,000 ರೈತರಿಗೆ ಅನುಕೂಲವಾಗಲಿದೆ. ಡಿಸಿಸಿ/ಪಿಕಾರ್ಡ್ ಬ್ಯಾಂಕುಗಳಿಗೆ 496 ಕೋಟಿ ರೂ.ಗಳಷ್ಟು ಸಾಲ ಮರುಪಾವತಿಯಾಗುವ ನಿರೀಕ್ಷೆ. ಇದಕ್ಕೆ 450 ಕೋಟಿ ರೂ. ಅನುದಾನ.
- ಕರ್ನಾಟಕ ರಾಜ್ಯದ ಇತರ ಪ್ರಮುಖ ಬೆಳೆಗಳಾದ ಅಡಿಕೆ, ಈರುಳ್ಳಿ, ದ್ರಾಕ್ಷಿ, ಮಾವು, ಬಾಳೆ ಮತ್ತು ಇತರ ತೋಟಗಾರಿಕಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ.
- ಕನಿಷ್ಠ ಬೆಂಬಲ ಬೆಲೆಯನ್ನು ವ್ಯವಸಾಯಕ್ಕೆ ತಗಲುವ ವೆಚ್ಚ ಮತ್ತು ಶೇಕಡಾ 50 ರಷ್ಟು ಲಾಭಾಂಶ ಆಧಾರದಡಿ ನಿಗದಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ.
- ಮಾಧ್ಯಮಿಕ, ಫೆಡರಲ್ ಹಾಗೂ ಅಪೆಕ್ಸ್ ಸಹಕಾರ ಸಂಘಗಳ ಆಡಳಿತ ಮಂಡಳಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಮೀಸಲಾತಿ ತರಲು ಅಧಿನಿಯಮಗಳಿಗೆ ತಿದ್ದುಪಡಿ.
- ಯಲಬುರ್ಗಾ, ಬಸವನಬಾಗೇವಾಡಿ, ರಾಣೆಬೆನ್ನೂರು, ಬಳ್ಳಾರಿ ಹಾಗೂ ಗದಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಒಟ್ಟು 50 ಕೋಟಿ ರೂ. ವೆಚ್ಚದಲ್ಲಿ ಹಾಗೂ ರಾಯಚೂರು ಮತ್ತು ಮೈಸೂರಿನಲ್ಲಿ ತಲಾ 40 ಕೋಟಿ ರೂ. ವೆಚ್ಚದಲ್ಲಿ ಶೀತಲಗೃಹಗಳ ನಿರ್ಮಾಣ.
- ರಾಯಚೂರಿನಲ್ಲಿ ಸುಸಜ್ಜಿತ ಒಣಮೆಣಸಿನಕಾಯಿ ಮಾರುಕಟ್ಟೆಯನ್ನು ಅಂದಾಜು 25 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು ಮತ್ತು ರಾಣೆಬೆನ್ನೂರಿನಲ್ಲಿ 112 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 222 ಎಕರೆ ಮೆಗಾ ಮಾರುಕಟ್ಟೆ ಪ್ರಾಂಗಣದಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ಪ್ರಾರಂಭ.
- ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಮಾರುಕಟ್ಟೆಯಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ ಸ್ಥಾಪನೆ.
- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಎಲ್ಲಾ ಕಾರ್ಯ ಚಟುವಟಿಕೆಗಳನ್ನು 10 ಕೋಟಿ ರೂ. ವೆಚ್ಚದಲ್ಲಿ ಡಿಜಿಟೈಸ್ ಮಾಡಲಾಗುವುದು.
- ಎಪಿಎಂಸಿಗಳಲ್ಲಿ ಪಿಪಿಪಿ ಮಾದರಿಯಲ್ಲಿ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರ ಹಾಗೂ ಪೆಟ್ರೋಲ್ ಬಂಕ್ ಸ್ಥಾಪನೆ.
- ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಸಮಿತಿಗಳಿಂದ ವಂತಿಗೆಯನ್ನು ಪಡೆಯುವ ಮೂಲಕ ಮಾರುಕಟ್ಟೆ ಅಭಿವೃದ್ಧಿ ಸಹಾಯ ನಿಧಿ ಸ್ಥಾಪಿಸಲು ಕಾನೂನು ರಚನೆ.
- ಬೆಂಬಲ ಬೆಲೆ ಯೋಜನೆ ಜಾರಿಗೆ ಶಾಸನಾತ್ಮಕ ಬೆಂಬಲ ನೀಡಲು ಕ್ರಮ.
- ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹಿತ ಕಾಯಲು ಮತ್ತು ತೂಕದಲ್ಲಾಗುವ ಮೋಸ ತಡೆಗಟ್ಟಲು ಎಲ್ಲಾ ಸಕ್ಕರೆ ಕಾರ್ಖಾನೆಗಳ ಬಳಿ ಎಪಿಎಂಸಿಗಳ ಮೂಲಕ ವೇ-ಬ್ರಿಜ್ಗಳ ಸ್ಥಾಪನೆ.
- ಕರ್ನಾಟಕ ರಾಜ್ಯ ಉಗ್ರಾಣ ನಿಗಮದಲ್ಲಿ ಬಳಕೆಯಾಗದೇ ಇರುವ ಉಗ್ರಾಣಗಳ ಸಾಮರ್ಥ್ಯ ಬಳಸಿ ಪಿಪಿಪಿ ಮಾದರಿಯಲ್ಲಿ ಶೀತಲಗೃಹಗಳ ಸ್ಥಾಪನೆ.