ಬೆಂಗಳೂರು: ದಲಿತರು ಹಾಗೂ ಹಿಂದೂಗಳನ್ನು ಹತ್ತಿಕ್ಕುವ ಸರ್ಕಾರ ರಾಜ್ಯದಲ್ಲಿದೆ. ಈ ಸರ್ಕಾರದ ನಡೆ, ನುಡಿ ಬಗ್ಗೆ ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಾಗಮಂಗಲದಲ್ಲಿ ಗಣಪತಿ ನಿಮಜ್ಜನ ಮೆರವಣಿಗೆಯ ಮೇಲೆ ಕೆಲವರು ಕಲ್ಲುಗಳನ್ನು ಎಸೆದಿದ್ದಾರೆ. ಈ ಕಲ್ಲುಗಳು ಹೇಗೆ ಬಂದವು? ಲಾಂಗುಗಳು, ಪೆಟ್ರೋಲ್ ಬಾಂಬ್ ಹೇಗೆ ಬಂದವು? ಪೆಟ್ರೋಲ್ ಬಾಂಬ್ ಎಸೆದು ಅಂಗಡಿಗಳನ್ನು ಸುಟ್ಟು ಹಾಕಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಹಲವಾರು ಅಂಗಡಿಗಳು ಭಸ್ಮವಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಇದು ಹಿಂದೂಗಳಿಗೆ ರಕ್ಷಣೆ ಕೊಡದ ಸರ್ಕಾರ. ಗೃಹ ಸಚಿವರು ಇದೊಂದು ಸಣ್ಣ ಘಟನೆ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಇದರ ಕುರಿತು ಚಕಾರ ಎತ್ತುತ್ತಿಲ್ಲ. ಈ ಘಟನೆ ಬಗ್ಗೆ ಅವರು ಗಮನ ಕೊಡಬೇಕು. ಕೇವಲ ಹಿಂದೂಗಳನ್ನು ಮಾತ್ರ ಎ1, ಎ2 ಆರೋಪಿ ಮಾಡುತ್ತಿದ್ದಾರೆ. ಕಲ್ಲೆಸೆದವರ ಮೇಲೆ ಆರೋಪಿ ನಂ 1, ಆರೋಪಿ ನಂ 2 ಎಂದು ಹೆಸರಿಸಬೇಕಿತ್ತು. ಈ ಸರ್ಕಾರಕ್ಕೆ ನಾಚಿಕೆ, ಮಾನ, ಮರ್ಯಾದೆ, ಗೌರವ ಏನೇನೂ ಇಲ್ಲ ಎಂದು ರವಿಕುಮಾರ್ ಕಿಡಿಕಾರಿದರು.
ಬೆಳಗಾವಿಯಲ್ಲಿ ಸುನೀಲ ಕುಮಾರ್ ಆಕ್ರೋಶ: ಗೃಹ ಇಲಾಖೆ ಎಸ್ಡಿಪಿಐ ಕಪಿಮುಷ್ಠಿಗೆ ಸಿಕ್ಕಿರುವ ಅನುಮಾನ ಮೂಡುತ್ತಿದೆ. ನಾಗಮಂಗಲ ಘಟನೆಯು ಪೂರ್ವ ನಿಯೋಜಿತ ಕೃತ್ಯ ಎಂದು ಎಂಥವರಿಗೂ ಗೊತ್ತಾಗುತ್ತದೆ ಎಂದು ರಾಜ್ಯ ಬಿಜೆಪಿ ಪ್ರಧಾನಕಾರ್ಯದರ್ಶಿ ಸುನೀಲ ಕುಮಾರ್ ಕಿಡಿಕಾರಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಗಮಂಗಲದಲ್ಲಿ ನಡೆದ ಹಲ್ಲೆ ಘಟನೆ ಆತಂಕದ ವಾತಾವರಣಕ್ಕೆ ಸಾಕ್ಷಿಯಾಗಿದೆ. ಹಿಂದೂ ಧಾರ್ಮಿಕ ಚಟುವಟಿಕೆ ಮಾಡದ ಪರಿಸ್ಥಿತಿ ನಿರ್ಮಾಣ ಆಗಿದೆ. ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿಲ್ಲ. ನಿನ್ನೆ ನಾನೂ ಸಹ ಸಹ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಹಿಂದೂಗಳ ಅಂಗಡಿಗಳನ್ನು ಟಾರ್ಗೆಟ್ ಮಾಡಲಾಗಿದೆ. ಗೃಹ ಸಚಿವರು ಇದು ಸಣ್ಣ ಘಟನೆ ಅಂತಾರೆ. ಇದು ಅವರ ಓಲೈಕೆ ರಾಜಕೀಯಕ್ಕೆ ಸಾಕ್ಷಿಯಾಗಿದೆ. ಯಾವುದೇ ಮೆರವಣಿಗೆ ಮೇಲೆಯೂ ಕಲ್ಲು ತೂರಾಟ ನಡೆಯಬಾರದು. ನೊಂದವರಿಗೆ ಪರಿಹಾರ ಕೊಡಿ, ಬಂಧನ ಮಾಡಿದವರನ್ನು ಬಿಡುಗಡೆ ಮಾಡಬೇಕು. ಮೊಕದ್ದಮೆ ಹಿಂಪಡೆಯಿರಿ ಎಂದು ಸುನೀಲ್ ಕುಮಾರ್ ಒತ್ತಾಯಿಸಿದರು.
ಸಂಸದ ಜಗದೀಶ ಶೆಟ್ಟರ್ ಕಿಡಿ: ನಾಗಮಂಗಲದ ಪ್ರಕರಣದ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಸಂಸದ ಜಗದೀಶ ಶೆಟ್ಟರ್, ತುಷ್ಟೀಕರಣ ನೀತಿಯಿಂದಲೇ ಈ ರೀತಿಯ ಘಟನೆ ಆಗುತ್ತಿವೆ. ರಾಜ್ಯದಲ್ಲಿ ಈ ರೀತಿ ಯಾರು ಗಲಾಟೆಗೆ ಪ್ರಚೋದನೆ ಕೊಟ್ಟರು? ಆರೋಪಿಗಳ ರಕ್ಷಣೆ ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಇದು ಸ್ವತಂತ್ರ ಭಾರತ ದೇಶವಿದ್ದು, ಇಂಥವರಿಗೆ ಸಹಕಾರ ಕೊಡುವುದರಿಂದ ಇದೆಲ್ಲಾ ಪ್ರಾರಂಭ ಆಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ಇಂತಹ ಘಟನೆಗಳು ಸಂಭವಿಸಿವೆ. ಅದಕ್ಕೆ ಇದೊಂದು ಉದಾಹರಣೆ ಎಂದು ಶೆಟ್ಟರ್ ಕಿಡಿಕಾರಿದರು.
ನಾನೇ ಸಿಎಂ ಆಗಿ ಮುಂದುವರೆಯುವೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ಆಪಾದನೆ ಬಂದಾಗ ಎಲ್ಲ ಮುಖ್ಯಮಂತ್ರಿಗಳು ನಾನೇ ಮುಂದುವರೆಯುತ್ತೇನೆ ಅಂತಾ ಹೇಳುತ್ತಾರೆ. ನನ್ನ ವಿರುದ್ಧ ತೀರ್ಪು ಬರುತ್ತದೆ. ನಾನು ರಾಜೀನಾಮೆ ಕೊಟ್ಟು ಹೋಗುತ್ತೇನೆ ಅಂತಾ ಯಾವ ಮುಖ್ಯಮಂತ್ರಿಯೂ ಹೇಳುವುದಿಲ್ಲ. ಇಲ್ಲಿ ರಾಜೀನಾಮೆ ಕೊಡುವವರೇ ಹೇಳಬೇಕು, ಹೇಳುತ್ತಾರಷ್ಟೇ. ಕೊನೆಗೆ ಅವರ ಹಣೆಬರಹ ಕೋರ್ಟ್ನಲ್ಲಿ ನಿರ್ಧಾರವಾಗುತ್ತದೆ ಎಂದು ಕುಟುಕಿದರು.