ಬೆಂಗಳೂರು: ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ಆರಂಭಗೊಂಡಿದ್ದು, ಹಲವು ವಿಚಾರಗಳ ಕುರಿತು ಚರ್ಚೆ ನಡೆಯಲಿದೆ. ವಿಶೇಷವಾಗಿ, ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಸಮಾಲೋಚನೆ ನಡೆಯಲಿದೆ ಎನ್ನಲಾಗಿದೆ.
ಸದಸ್ಯತ್ವ ಅಭಿಯಾನ ವಿಚಾರದಲ್ಲಿ ಪಕ್ಷ ನಿರೀಕ್ಷಿತ ಗುರಿ ತಲುಪದಿರುವ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ. ಪಕ್ಷದ ಅಡಿಪಾಯವೇ ಕಾರ್ಯಕರ್ತರು ಹಾಗೂ ಸದಸ್ಯರು. ಹಾಗಾಗಿ ಸದಸ್ಯತ್ವ ಅಭಿಯಾನಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಸಾಕಷ್ಟು ಚರ್ಚೆ ನಡೆಯಲಿದೆ. ಇದರ ಜೊತೆಗೆ ಪಕ್ಷದಲ್ಲಿನ ಅಸಮಾಧಾನ ವಿಚಾರದ ಕುರಿತೂ ಸಮಾಲೋಚನೆ ನಡೆಯಲಿದೆ. ಒಗ್ಗಟ್ಟಿನಲ್ಲಿ ಮುನ್ನಡೆಯಲು ಅಗತ್ಯ ಕ್ರಮ ವಹಿಸುವ ಕುರಿತು ಸಮಾಲೋಚನೆ ನಡೆಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೂರು ವಿಧಾನಸಭಾ ಕ್ಷೇತ್ರಗಳು ಹಾಗು ಒಂದು ವಿಧಾನ ಪರಿಷತ್ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಯಲಿದೆ. ಈಗಾಗಲೇ ಕ್ಷೇತ್ರವಾರು ಚುನಾವಣಾ ಉಸ್ತುವಾರಿ ತಂಡ ರಚಿಸಿದ್ದು ವರದಿ ಪಡೆದುಕೊಂಡಿದೆ. ಅದರ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಲಾಗುತ್ತದೆ. ಪ್ರತಿ ಕ್ಷೇತ್ರದಿಂದ ತಲಾ ಮೂರು ಹೆಸರುಗಳನ್ನು ಅಂತಿಮಗೊಳಿಸಿ ಹೈಕಮಾಂಡ್ಗೆ ಕಳುಹಿಸಿಕೊಡಬೇಕಿದ್ದು, ಅದಕ್ಕೆ ಸಂಬಂಧಿಸಿದಂತೆ ಮಹತ್ವದ ಮಾತುಕತೆ ನಡೆಸಲಾಗುತ್ತದೆ ಎನ್ನಲಾಗಿದೆ.
ಕೋರ್ ಕಮಿಟಿ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಆರ್.ಅಶೋಕ್, ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್, ಪುದುಚೇರಿ ರಾಜ್ಯ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾಣ ಉಪಸ್ಥಿತರಿದ್ದರು.
ಇದನ್ನೂ ಓದಿ: ರಾಜ್ಯಪಾಲರ ನಡವಳಿಕೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ: ಪರಮೇಶ್ವರ್ - G Parameshwar