ಬೆಂಗಳೂರು: ಒಂದು ವರ್ಷಕ್ಕೆ ಪೊಲೀಸರ ವರ್ಗಾವಣೆ ತಡೆಯುವ 2024ನೇ ಸಾಲಿನ ಕರ್ನಾಟಕ ಪೊಲೀಸ್ (ತಿದ್ದುಪಡಿ) ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿತು.
ವಿಧೇಯಕವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸದನದಲ್ಲಿ ಪರ್ಯಾಲೋಚಿಸಿ, ಪೊಲೀಸರ ವರ್ಗಾವಣೆ ಕುರಿತ ವಿಧೇಯಕ ಇದಾಗಿದೆ. ಪೊಲೀಸರ ವರ್ಗಾವಣೆ ಅವಧಿ ಒಂದು ವರ್ಷದಿಂದ ಎರಡು ವರ್ಷಕ್ಕೆ ಏರಿಕೆ ಮಾಡಲಾಗಿದೆ. ಒಂದು ವರ್ಷವಾದ ನಂತರ ವರ್ಗಾವಣೆ ಮಾಡಬೇಕು ಅಂತ ಹಾಲಿ ನಿಯಮ ಇದೆ. ಒಂದೇ ವರ್ಷಕ್ಕೆ ವರ್ಗಾವಣೆ ಆದರೆ ಪ್ರಕರಣಗಳ ತನಿಖೆ, ವಿಚಾರಣೆಗೆ ತೊಡಕಾಗಲಿದೆ. ಹೀಗಾಗಿ ಒಂದು ವರ್ಷಕ್ಕೆ ಪೊಲೀಸರ ವರ್ಗಾವಣೆಗೆ ಬ್ರೇಕ್ ಹಾಕಲು ವಿಧೇಯಕ ತರಲಾಗಿದೆ ಎಂದರು. ಈ ತಿದ್ದುಪಡಿ ವಿಧೇಯಕವನ್ನು ವಿಪಕ್ಷ ಸದಸ್ಯರೂ ಸ್ವಾಗತಿಸಿದರು.
30 ಕಾನೂನುಗಳ ನಿರಸನ: 2024ನೇ ಸಾಲಿನ ಕರ್ನಾಟಕ ಕೆಲವು ಅಧಿನಿಯಮಗಳು ಮತ್ತು ಪ್ರಾದೇಶಿಕ ಕಾನೂನುಗಳನ್ನು ನಿರಸನಗೊಳಿಸುವ ವಿಧೇಯಕ ಅಂಗೀಕಾರವಾಯಿತು. ಹಳೆಯದಾದ ಅಪ್ರಸ್ತುತ ಒಟ್ಟು 30 ಕಾನೂನುಗಳನ್ನು ನಿರಶನಗೊಳಿಸುವ ವಿಧೇಯಕವಾಗಿದೆ. ಕೆಲ ಕಾನೂನುಗಳ ಸದ್ಯದ ಪರಿಸ್ಥಿತಿಗೆ ಅಪ್ರಸ್ತುತ ಹಾಗೂ ಅಪ್ರಯೋಜಕವಾಗಿದೆ. ಈ ನಿಟ್ಟಿನಲ್ಲಿ ಸಮಗ್ರ ಚರ್ಚೆ ನಡೆಸಿ ಒಟ್ಟು 30 ಹಳೆಯ ಕಾನೂನುಗಳನ್ನು ನಿರಸನಗೊಳಿಸಲು ನಿರ್ಧರಿಸಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದರು.
ಕಾಲಾನುಕ್ರಮದಲ್ಲಿ ಪ್ರಸ್ತುತತೆ ಕಳೆದುಕೊಂಡ, ಬಳಕೆಯಲ್ಲಿರದ ಕಾನೂನುಗಳು ನಿಷ್ಕ್ರಿಯವಾಗಿದ್ದು, ರಾಜ್ಯ ಕಾನೂನು ಆಯೋಗದ ಶಿಫಾರಸು ಅನ್ವಯ ಹಳೆಯ ಕಾನೂನುಗಳನ್ನು ರದ್ದು ಮಾಡಲಾಗುತ್ತಿದೆ. ಸ್ಟೇಟ್ ಬ್ಯಾಂಕ್ ಅಧಿನಿಯಮ, ಹೈದರಾಬಾದ್ ಅಧಿನಿಯಮ ಎಲ್19, ಜಾಗೀರುಗಳ ರದ್ದತಿ, ಪಿಂಚಣಿ ಅಧಿನಿಯಮ, ಟ್ರಾಮ್ ಮಾರ್ಗಗಳ ಅಧಿನಿಯಮ, ಮೈಸೂರು ಅಧಿನಿಯಮ, ನಂಬೂದರಿ ಅಧಿನಿಯಮ, ಬಾಂಬೆ ತಿದ್ದುಪಡಿ ಅಧಿನಿಯಮ, ದೇವಾಲಯಗಳ ಪ್ರವೇಶ ಅಧಿಕೃತಗೊಳಿಸುವುವಿಕೆ ಅಧಿನಿಯಮ ಸೇರಿ 30 ಕಾನೂನುಗಳನ್ನು ನಿಷ್ಕ್ರಿಯಗೊಳಿಸುವ ವಿಧೇಯಕ ಇದಾಗಿದೆ.
ಇನ್ನು 2024ನೇ ಸಾಲಿನ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2024ನೇ ಸಾಲಿನ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಮತ್ತು 2024ನೇ ಸಾಲಿನ ಶ್ರೀ ಹುಲಿಗೆಮ್ಮ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕಗಳನ್ನು ವಿಧಾನಸಭೆಯಲ್ಲಿ ಅಂಗೀಕೃತಗೊಳಿಸಲಾಯಿತು.
2024ನೇ ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ ಅಂಗೀಕಾರ: ಸಾಮಾನ್ಯ ಸಂಗ್ರಹಣಾ ನಿಧಿಯ ಮೊತ್ತವನ್ನು ಹೆಚ್ಚಿಸಲು, ಅಧಿಸೂಚಿತ ಸಂಸ್ಥೆಯ ವ್ಯವಸ್ಥಾಪನಾ ಸಮಿತಿಯಲ್ಲಿ ವಿಶ್ವಕರ್ಮ ಹಿಂದೂ ದೇವಾಲಯ ವಾಸ್ತುಶಿಲ್ಪ ಮತ್ತು ಶಿಲ್ಪಶಾಸ್ತ್ರದಲ್ಲಿ ಕೌಶಲ್ಯವುಳ್ಳ ವ್ಯಕ್ತಿಯನ್ನು ಸೇರಿಸಲು; ಗ್ರೂಪ್-ಎ ದೇವಾಲಯಗಳ ಅಧಿಕಾರ ಕ್ಷೇತ್ರ ವ್ಯಾಪ್ತಿಯೊಳಗೆ ಯಾತ್ರಾರ್ಥಿಗಳಿಗೆ ಸುರಕ್ಷತೆಯನ್ನು ಕಲ್ಪಿಸಲು ನಿರ್ಮಾಣ ಮತ್ತು ನಿರ್ವಹಣೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಪರಿಶೀಲಿಸಲು, ಪುನರ್ ಪರಿಶೀಲಿಸಲು ಮತ್ತು ಪ್ರಸ್ತಾವನೆಗಳನ್ನು ಸಲ್ಲಿಸಲು ಜಿಲ್ಲಾ ಮಟ್ಟದ ಮತ್ತು ರಾಜ್ಯ ಉನ್ನತ ಮಟ್ಟದ ಸಮಿತಿಗಳನ್ನು ರಚಿಸಲು ತಿದ್ದುಪಡಿ ವಿಧೇಯಕ ತರಲಾಗಿದೆ.
ದೇವಸ್ಥಾನಗಳ ಹುಂಡಿಗೆ ಬರುವ ಹಣದಲ್ಲಿ ಸಾಮಾನ್ಯ ಸಂಗ್ರಹಣ ನಿಧಿಗೆ ವಂತಿಗೆ ಸಂಗ್ರಹಿಸಲಾಗುತ್ತದೆ. ಆ ನಿಧಿ ಹಣವನ್ನು ನೌಕರರು, ದೇವಸ್ಥಾನಗಳಿಗೆ ಹಣ ಕೊಡುವುದಕ್ಕೆ ಬಳಸಲಾಗುತ್ತದೆ. ಹೊಸ 10 ಲಕ್ಷ ರೂ. ವರೆಗೆ ಆದಾಯ ಇರುವ ದೇವಾಸ್ಥಾನಗಳು ವಂತಿಕೆ ಕೊಡುವುದರಿಂದ ವಿನಾಯಿತಿ ನೀಡಲಾಗಿದೆ. 10 ಲಕ್ಷ ರೂ.ನಿಂದ ಒಂದು ಕೋಟಿ ರೂ.ವರೆಗೆ ಆದಾಯ ಇರುವ ದೇವಾಸ್ಥಾನಗಳಿಂದ 5% ವಂತಿಗೆ ಹಾಗೂ ಒಂದು ಕೋಟಿ ರೂ. ಮೇಲ್ಪಟ್ಟು ಆದಾಯ ಹೊಂದಿರುವ ದೇವಸ್ಥಾನಗಳಿಂದ 10% ದರದಲ್ಲಿ ವಂತಿಗೆ ಪಡೆಯಲು ತಿದ್ದುಪಡಿ ತರಲಾಗಿದೆ. ಇತ್ತ ದೈವಸ್ಥಾನಗಳ ಅಭಿವೃದ್ಧಿಗೆ ಹಾಗೂ ಪಾತ್ರಿಗಳಿಗೂ ಮಾಸಿಕವಾಗಿ ವೇತನ ಹಾಗೂ ಸವಲತ್ತುಗಳನ್ನು ಈ ವಿಧೇಯಕದಲ್ಲಿ ಸೇರಿಸಲು ಸ್ಪೀಕರ್ ಮನವಿ ಮಾಡಿದರು. ವಿಧೇಯಕದಲ್ಲಿ ಸೇರಿಸಲು ಕ್ರಮ ವಹಿಸುವುದಾಗಿ ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದರು.
ಒಟ್ಟು 13 ವಿಧೇಯಕಗಳ ಅಂಗೀಕಾರ: ಬುಧವಾರ ವಿಧಾನಸಭೆಯಲ್ಲಿ ಒಟ್ಟು 13 ವಿಧೇಯಕಗಳನ್ನು ಅಂಗೀಕರಿಸಲಾಯಿತು. 2024ನೇ ಸಾಲಿನ ಕರ್ನಾಟಕ ಕೆಲವು ಅಧಿನಿಯಮಗಳು ಮತ್ತು ಪ್ರಾದೇಶಿಕ ಕಾನೂನುಗಳನ್ನು ನಿರಸನಗೊಳಿಸುವ ವಿಧೇಯಕ, 2024ನೇ ಸಾಲಿನ ಕರ್ನಾಟಕ ಪೊಲೀಸ್ (ತಿದ್ದುಪಡಿ) ವಿಧೇಯಕ, 2024ನೇ ಸಾಲಿನ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2024ನೇ ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ ವಿಧೇಯಕ), 2024ನೇ ಸಾಲಿನ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಹಾಗೂ 2024ನೇ ಸಾಲಿನ ಶ್ರೀ ಹುಲಿಗೆಮ್ಮ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2024ನೇ ಸಾಲಿನ ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರುಗಳ ವಿಧೇಯಕ, 24ನೇ ಸಾಲಿನ ಸಿಗರೇಟುಗಳ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತ ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಮಯನ) (ಕರ್ನಾಟಕ ತಿದ್ದುಪಡಿ) ವಿಧೇಯಕ, 2024ನೇ ಅಂತರ್ ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2024ನೇ ಸಾಲಿನ ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ ಹಾಗೂ 2024ನೇ ಸಾಲಿನ ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕ, 2024ನೇ ಸಾಲಿನ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ವಿಧೇಯಕ, 2024ನೇ ಸಾಲಿನ ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ ವಿಧೇಯಕವನ್ನು ಪರ್ಯಾಲೋಚಿಸಿ ಅಂಗೀಕರಿಸಲಾಯಿತು.