ತುಮಕೂರು: ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ನಡೆದ ಕರ್ನಾಟಕ - ಕೆ.1000 ಕಾರು ರ‍್ಯಾಲಿ ನೋಡುಗರನ್ನು ಆಕರ್ಷಿಸಿತು. ರ‍್ಯಾಲಿಯಲ್ಲಿ 56ಕ್ಕೂ ಹೆಚ್ಚು ಕಾರುಗಳು ಟ್ರಾಕ್ ನಲ್ಲಿ ಧೂಳೆಬ್ಬಿಸುತ್ತ ಸಾಗಿದವು. ನೆರೆದಿದ್ದ ಜನರು ಕೇಕೆ ಶಿಳ್ಳೆ ಹಾಕುತ್ತಾ ಹುರಿದುಂಬಿಸಿದರು.
ಜಿಲ್ಲೆಯ ಗುಬ್ಬಿ ಮತ್ತು ತಿಪಟೂರು ತಾಲೂಕಿನ ಗಡಿ ವ್ಯಾಪ್ತಿಯಲ್ಲಿ ಟ್ರ್ಯಾಕ್ ವ್ಯವಸ್ಥೆ ಮಾಡಲಾಗಿತ್ತು. ಬೊಮ್ಮರಸನಹಳ್ಳಿ, ಶಿವಸಂದ್ರ, ಹತ್ಯಾಳ್, ಕೊಂಡ್ಲಿ ಭಾಗದಲ್ಲಿ ಕಾರುಗಳು ಧೂಳೆಬ್ಬಿಸಿದವು. ಸುಮಾರು 50 ಕಿ.ಮೀ. ಅಂತರದ ಟ್ರ್ಯಾಕ್ನಲ್ಲಿ ಎಂಆರ್ಎಫ್, ಮಹೀಂದ್ರ, ವೋಕ್ಸ್ ವ್ಯಾಗನ್, ಮಾರುತಿ ಸೇರಿದಂತೆ 56 ವಿವಿಧ ಹೆಸರಾಂತ ಕಂಪನಿಯ ಕಾರುಗಳು ಸಂಚರಿಸಿದವು. ಕರ್ನಾಟಕ-ಕೆ.1000 ವತಿಯಿಂದ ಇದುವರೆಗೂ ನಿರಂತರವಾಗಿ 48 ರ‍್ಯಾಲಿಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಅದರಲ್ಲಿ 25 ರ‍್ಯಾಲಿಗಳು ತುಮಕೂರು ಜಿಲ್ಲೆಯಲ್ಲಿಯೇ ನಡೆದಿರುವುದು ವಿಶೇಷವಾಗಿದೆ.
ಗೌರವ ಗಿಲ್ ಭಾಗಿ: ಅನೇಕ ರ‍್ಯಾಲಿಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಹೆಸರಾಂತ ಚಾಲಕ ಗೌರವ ಗಿಲ್, ಗೃಹ ಸಚಿವ ಜಿ.ಪರಮೇಶ್ವರ್ ಅವರ ಮಗಳು ಸನಾ, ಆದಿತ್ಯ, ವೀರೇಂದ್ರ ಕಾಶಿಪ್ ಸೇರಿದಂತೆ ಅನೇಕರು ರ‍್ಯಾಲಿಯನ್ನು ಕಣ್ತುಂಬಿಕೊಂಡರು. ಟ್ರ್ಯಾಕ್ನಲ್ಲಿ ಒಂದಕ್ಕಿಂತ ಒಂದು ಕಾರುಗಳು ಚಿರತೆ ವೇಗದಲ್ಲಿ ಆಳೆತ್ತರಕ್ಕೆ ಧೂಳೆಬ್ಬಿಸುತ್ತಾ ಚಲಿಸಿದವು. ಅವುಗಳನ್ನ ಕಂಡ ಪ್ರೇಕ್ಷಕರು ಶಿಳ್ಳೆ ಹೊಡೆದು, ಕೂಗುತ್ತ ಹುರಿದುಂಬಿಸಿದರು. ತಿರುವಿನಲ್ಲಿಯೂ ಬಗೆ ಬಗೆಯ ಕಾರುಗಳು ಸೌಂಡ್ ಮಾಡುತ್ತ ಹೋಗುತ್ತಿದ್ದ ದೃಶ್ಯಗಳು ಮೈ ಜುಮ್ಎನಿಸುವಂತಿತ್ತು.
ಪ್ರತಿ ವರ್ಷದಂತೆ ಈ ಬಾರಿಯೂ ಕಾರು ರೇಸ್ ಎರಡು ದಿನಗಳ ಕಾಲ ಪ್ರೇಕ್ಷಕರಿಗೆ ರಸದೌತಣ ನೀಡಿತು. ರ‍್ಯಾಲಿಯನ್ನು ಹತ್ತಿರದಿಂದ ನೋಡುತ್ತ ಪ್ರೇಕ್ಷಕರು ಎಂಜಾಯ್ ಮಾಡಿದರು. ರೋಮಾಂಚನಕಾರಿ ಕಾರು ರೇಸ್ ಅನ್ನು ಜನರು ರಸ್ತೆ ಬದಿ, ತೋಟದ ಸಾಲಿನಲ್ಲಿ ನಿಂತು ಕುತೂಹಲದಿಂದ ವೀಕ್ಷಿಸಿದರು.
ಇದನ್ನೂ ಓದಿ: ಬಂಡೀಪುರದಲ್ಲಿ ಹಸಿರು ಸುಂಕಕ್ಕೆ ಫಾಸ್ಟ್ಟ್ಯಾಗ್: ಟ್ರಾಫಿಕ್ ಕಿರಿಕಿರಿಗೆ ಬೀಳಲಿದೆ ಬ್ರೇಕ್