ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ದೆಹಲಿಯಲ್ಲಿ ನಡೆದ ಭಾರತ ಕೌಶಲ್ಯ ಸ್ಪರ್ಧೆಯಲ್ಲಿ ಕನ್ನಡಿಗರು 47 ಪದಕಗಳನ್ನ ಗೆದ್ದು ದೇಶದಲ್ಲಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಇಂದು ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋರ್ಟ್ಗೆ ಆಗಮಿಸಿದ ಸ್ಪರ್ಧಿಗಳಿಗೆ ಕೌಶಲ್ಯಾಭಿವೃದ್ಧಿ ಇಲಾಖೆ ಅದ್ಧೂರಿಯಾಗಿ ಸ್ವಾಗತ ಕೋರಿದೆ.
ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಈ ವರ್ಷದ ಭಾರತದ ಕೌಶಲ್ಯ ಸ್ಪರ್ಧೆಯನ್ನು ಮೇ.15 ರಿಂದ 19 ರವರೆಗೆ ದೆಹಲಿಯ ದ್ವಾರಕಾದಲ್ಲಿ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ 400ಕ್ಕೂ ಹೆಚ್ಚು ಉದ್ಯಮ ತಜ್ಞರು ಸೇರಿದಂತೆ 30 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 900ಕ್ಕೂ ಹೆಚ್ಚು ಸ್ಪರ್ಧಿಗಳು ತಮ್ಮ ರಾಜ್ಯಗಳನ್ನು ಪ್ರತಿನಿಧಿಸಿದ್ದರು, ಕರ್ನಾಟಕದಿಂದ ಒಟ್ಟು 52 ಸ್ಪರ್ಧಿಗಳನ್ನು ಕಳುಹಿಸಲಾಗಿತ್ತು. ಜೊತೆಗೆ 42 ಕೌಶಲ್ಯ ವಿಭಾಗದಲ್ಲಿ ಸ್ಪರ್ಧಿಸಿ 13 ಚಿನ್ನದ ಪದಕ, 12 ರಜತ, 3 ಕಂಚು ಹಾಗೂ 19 ಶ್ರೇಷ್ಠತೆಯ ಪದಕಗಳನ್ನು ಪಡೆಯುವ ಮೂಲಕ ರಾಜ್ಯದ ಯುವಕ - ಯುವತಿಯರು ದೇಶಕ್ಕೆ ದ್ವಿತೀಯ ಸ್ಥಾನ ಪಡೆದು ರಾಜ್ಯದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಈ ಬಾರಿ ಡ್ರೋನ್ ಫಿಲ್ಮ್ ತಯಾರಿಕೆ, ಜವಳಿ-ನೇಯ್ಗೆ, ಲೆದರ್-ಶೂಮೇಕಿಂಗ್ ಮತ್ತು ಪ್ರಾಸ್ತೆಟಿಕ್ಸ್-ಮೇಕಪ್‌ನಂತಹ 9 ಪ್ರದರ್ಶನ ಕೌಶಲ್ಯಗಳ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಐಟಿಐಗಳು, ಎನ್‌ಎಸ್‌ಟಿಐಗಳು, ಪಾಲಿಟೆಕ್ನಿಕ್‌ಗಳು, ಎಂಜಿನಿಯರಿಂಗ್ ಸಂಸ್ಥೆಗಳು, ನರ್ಸಿಂಗ್ ಇನ್‌ಸ್ಟಿಟ್ಯೂಟ್‌ಗಳು ಮತ್ತು ಜೈವಿಕ ತಂತ್ರಜ್ಞಾನ ಸಂಸ್ಥೆಗಳು ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಈ ಕೌಶಲ್ಯ ಸ್ಪರ್ಧೆಗಳಲ್ಲಿ ಭಾಗಿಯಾದರು. ಕೌಶಲ್ಯ ಜಾಲದಲ್ಲಿ ಲಭ್ಯವಿರುವ ಉತ್ತಮ ಗುಣಮಟ್ಟದ ತರಬೇತಿಯನ್ನು ರಾಜ್ಯದ ಸ್ಪರ್ಧಿಗಳಿಗೆ ನೀಡಲಾಗಿದೆ.
ಇಂಡಿಯಾಸ್ಕಿಲ್ಸ್‌ನ ವಿಜೇತರು ಸೆಪ್ಟೆಂಬರ್ 2024 ರಲ್ಲಿ ಫ್ರಾನ್ಸ್‌ನ ಲಿಯಾನ್‌ನಲ್ಲಿ ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆಗೆ ತಯಾರಿ ನಡೆಸಲು ಉದ್ಯಮ ತಜ್ಞರಿಂದ ತರಬೇತಿಯನ್ನು ಪಡೆಯುತ್ತಾರೆ. ಅಲ್ಲಿ 70 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳೊಂದಿಗೆ ಸ್ಪರ್ಧಿಸುತ್ತಾರೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ: ಮತ್ತೆ ವಿದ್ಯಾರ್ಥಿನಿಯರೇ ಮೇಲುಗೈ - Second PUC Result