ಮಂಗಳೂರು(ದಕ್ಷಿಣ ಕನ್ನಡ): ಕನ್ನಡ ನಾಮಫಲಕದ ಹೋರಾಟ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ 31ಜಿಲ್ಲೆಗಳಿಗೂ ಅನ್ವಯವಾಗಲಿದೆ. ಇದು ಸರಕಾರದ ಆದೇಶ. ದಕ್ಷಿಣ ಕನ್ನಡ ಜಿಲ್ಲೆ ಕರ್ನಾಟಕದ ಹೊರತಾಗಿಲ್ಲ. ಆದ್ದರಿಂದ ಇಲ್ಲಿಯೂ ಈ ಕಾನೂನು ಅನ್ವಯವಾಗಲಿದೆ. ಮುಂದಿನ ದಿನಗಳಲ್ಲಿ ಕನ್ನಡ ಫಲಕ ಅಳವಡಿಕೆ ಹೋರಾಟ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಮುಂದುವರಿಯುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಹೇಳಿದರು.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನ್ನಡ ನಾಮಫಲಕ ಅಳವಡಿಸುವಲ್ಲಿ ವಿಫಲ ಆಗಿರುವುದರಿಂದ ರಾಜ್ಯ ಸರಕಾರದ ವಿರುದ್ಧ ಒತ್ತಡ ಹಾಕುವ ಕೆಲಸ ಮಾಡುತ್ತಲೇ ಇದ್ದೇವೆ. ಈಗಲೂ ಮಾರ್ಚ್ 20ಕ್ಕೆ ಕೊನೆಯ ಗಡುವು ಕೊಟ್ಟಿದ್ದೇವೆ. ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರೊಂದಿಗೂ ನಾವು ಮಾತನಾಡುತ್ತೇವೆ ಎಂದು ತಿಳಿಸಿದರು.
ಕನ್ನಡ ನಾಮಫಲಕ ಅಳವಡಿಕೆಗೆ ಸುಗ್ರೀವಾಜ್ಞೆ: ಕನ್ನಡ ನಾಮಫಲಕ ಅಳವಡಿಕೆಗೆ ಸುಗ್ರೀವಾಜ್ಞೆ ಹೊರಡಿಸಿದೆ. ನಾಮ ಫಲಕ ವಿಚಾರದಲ್ಲಿ 15 ದಿನಗಳ ಕಾಲ ಜೈಲುವಾಸ ಅನುಭವಿಸಿ ಬಂದಿದ್ದೇನೆ. ಕನ್ನಡದ ಗಟ್ಟಿ ಹೋರಾಟವನ್ನು ಸರ್ಕಾರ ಸಹಿಸಲಿಲ್ಲ. ಉದ್ಯಮಿಗಳ ಒತ್ತಡಕ್ಕೆ ಮಣಿದು ನಮಗೆ ಜೈಲಿಗೆ ಕಳುಹಿಸಿದರು. 6ನೇ ಬಾರಿ ನಾನು ಜೈಲಿಗೆ ಹೋಗಿ ಬಂದಿದ್ದೇನೆ.
ಕನ್ನಡ ನಾಮ ಫಲಕ ಅಳವಡಿಕೆ ಹೋರಾಟ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ನಡೆಸುತ್ತೇವೆ. ನಾಡು ನುಡಿಯ ವಿಚಾರ ಬಂದಾಗ ಯಾರೊಂದಿಗೂ ರಾಜಿ ಮಾಡುವ ಪ್ರಶ್ನೆಯಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನ್ನಡದ ಪರ ಕೆಲಸ ಮಾಡುವ ಅಭ್ಯರ್ಥಿಯನ್ನು ನಾವು ಬೆಂಬಲಿಸುತ್ತೇವೆ. ಯಾವುದೇ ಪಕ್ಷವನ್ನು ನಾವು ಬೆಂಬಲಿಸುವುದಿಲ್ಲ. ತುಳು ಭಾಷೆಯನ್ನು 8 ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಮೊದಲು ಧ್ವನಿ ಎತ್ತುವವರು ನಾವು ಎಂದು ಹೇಳಿದರು.
ಕನ್ನಡ ನಾಮಫಲಕ ಕಡ್ಡಾಯ ಹೋರಾಟ: ಎಲ್ಲ ಕನ್ನಡಿಗರು ಕರವೇ ಹೋರಾಟವನ್ನು ಬೆಂಬಲಿಸಿದ್ದಾರೆ. ಕನ್ನಡ ನಾಮಫಲಕ ಕಡ್ಡಾಯ ಹೋರಾಟವನ್ನು ಕೇವಲ ಬೆಂಗಳೂರಿಗೆ ಅಷ್ಟೇ ಅಲ್ಲದೇ ರಾಜ್ಯಾದ್ಯಂತ ಶೇ.60ರಷ್ಟು ಕನ್ನಡ ಬಳಕೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದೆವು. ಬೆಂಗಳೂರು ಅಷ್ಟೇ ಕನ್ನಡೀಕರಣ ಆಗಬಾರದು. ಇಡೀ ಕರ್ನಾಟಕ ರಾಜ್ಯವೇ ಕನ್ನಡೀಕರಣ ಆಗಬೇಕಿದೆ. ಕನ್ನಡ ನಾಮಫಲಕ ಅಳವಡಿಸುವಂತೆ ಒತ್ತಾಯಿಸಿ 31 ಜಿಲ್ಲೆಗಳಲ್ಲಿ ನನ್ನ ನೇತೃತ್ವದಲ್ಲೇ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದರು.
ಇದನ್ನೂ ಓದಿ:ಕಾಂಗ್ರೆಸ್ಗೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ: ಗತಿಗೆಟ್ಟ ಪಾರ್ಟಿಯಾಗಿ ಮಾರ್ಪಟ್ಟಿದೆ - ವಿಪಕ್ಷ ನಾಯಕ ಆರ್ ಅಶೋಕ್