ಗಂಗಾವತಿ: ಕಂಪ್ಲಿ ಮತ್ತು ಗಂಗಾವತಿ ಮಧ್ಯೆ ಸಂಪರ್ಕ ಕಲ್ಪಿಸುವ ಕಂಪ್ಲಿ ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ ಇಂದು ಅನುಮತಿ ನೀಡಲಾಗಿದೆ.
ತುಂಗಭದ್ರಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಬಿಟ್ಟಿದ್ದರಿಂದ ಸೇತುವೆ ಮೇಲೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಸದ್ಯ ನದಿಯ ನೀರಿನ ಮಟ್ಟ ಇಳಿಕೆ ಕಂಡ ಹಿನ್ನೆಲೆ ಸೇತುವೆ ಪರಿಶೀಲಿಸಿ, ಸದೃಢವಾಗಿರುವುದನ್ನು ಖಚಿತಪಡಿಸಿಕೊಂಡು ಭಾರೀ ವಾಹನಗಳನ್ನು ಹೊರತುಪಡಿಸಿ ಬೈಕ್, ಆಟೋ, ಕಾರು ಮತ್ತು ಶಾಲಾ ವಾಹನ, ಬಸ್ ಓಡಾಟಕ್ಕೆ ಅನುಮತಿ ನೀಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದೆ.
ಗಂಗಾವತಿಯ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿಶ್ವನಾಥ್ ನೇತೃತ್ವದ ಅಧಿಕಾರಿಗಳ ತಂಡ ಸೇತುವೆ ಪರಿಶೀಲನೆ ನಡೆಸಿತ್ತು. ರಾಜ್ಯ ಹೆದ್ದಾರಿ ಸಂಖ್ಯೆ-29, ಲಿಂಗಸಗೂರು - ಕುಡಿತಿನಿ ರಸ್ತೆಯ ಕಂಪ್ಲಿ ಸೇತುವೆ ಸದೃಢವಾಗಿದ್ದು, ಭಾರಿ ಗಾತ್ರದ ಸರಕು ಸಾಗಣೆ ವಾಹನ ಹೊರತುಪಡಿಸಿ ಇತರ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಡಲಾಗಿದೆ.