ಶಿವಮೊಗ್ಗ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗಲಿರುವ ಜನವರಿ 22ರಂದು ರಾಜ್ಯ ಸರ್ಕಾರಿ ರಜೆ ಘೋಷಿಸಬೇಕೆಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, 500 ವರ್ಷಗಳ ಗುಲಾಮಗಿರಿ ಮುಕ್ತ ಮಾಡಿ ರಾಮಮಂದಿರ ನಿರ್ಮಾಣ ಮಾಡುತ್ತಿದ್ದಾರೆ. ನಾಡಿದ್ದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆಗುತ್ತಿರುವುದು ಪ್ರಪಂಚದ ಹಿಂದೂಗಳಿಗೆ ಆನಂದವನ್ನು ತಂದಿದೆ. ಗಾಂಧೀಜಿ ಸಹ ರಾಮರಾಜ್ಯದ ಕನಸನ್ನು ಕಾಣುತ್ತಿದ್ದರು. ರಾಮಮಂದಿರ ಉದ್ಘಾಟನೆಯಾಗುತ್ತಿರುವ 22 ರಂದು ರಾಜ್ಯದಲ್ಲಿ ಸರ್ಕಾರಿ ರಜೆಯನ್ನು ಘೋಷಿಸಬೇಕೆಂದು ಸಿಎಂಗೆ ಒತ್ತಾಯಿಸುವುದಾಗಿ ತಿಳಿಸಿದರು.
ಪ್ರಪಂಚದ ಕ್ರಿಶ್ಚಿಯನ್ ಹಾಗೂ ಮುಸ್ಲಿಮರು ಸಹ ಅಯೋಧ್ಯೆಗೆ ಹೋಗುತ್ತಿದ್ದಾರೆ. ಎಐಸಿಸಿ ಅವರು ಮೊದಲು ಅಯೋಧ್ಯೆಗೆ ಹೋಗುವುದು ಬೇಡ ಎಂದರು. ನಂತರ ಇಷ್ಟ ಇದ್ದವರು ಹೋಗಬಹುದು ಎಂದರು. ಅನಂತರ 22 ರ ನಂತರ ಹೋಗುತ್ತೇವೆ ಎಂದವರು, ಈಗ ನಾವು ಹೋಗುತ್ತಿಲ್ಲ ಎಂದರು. ರಾಮ ದೇಶದ ಪ್ರತಿಯೊಬ್ಬ ವ್ಯಕ್ತಿಯನ್ನು ಒಂದುಗೂಡಿಸಿದ್ದಾರೆ. ಇದರಿಂದ ಮಹಾತ್ಮ ಗಾಂಧೀಜಿ ಅವರ ಸಮಾಧಿಯಲ್ಲಿ ಹೇ ರಾಮ್ ಎಂದು ಬರೆಯಿಸಲಾಗಿದೆ ಎಂದು ತಿಳಿಸಿದರು.
ಇನ್ನೆರಡು ದಿನ ಯಾರೂ ರಾಜಕೀಯ ಟೀಕೆ ಮಾಡಬೇಡಿ: ಇನ್ನೆರಡು ದಿನ ಯಾರೂ ಸಹ ರಾಜಕೀಯ ಟೀಕೆ ಮಾಡದೇ ಕೇವಲ ರಾಮನಾಮ ಜಪ ಮಾಡಿ ಎಂದು ಈಶ್ವರಪ್ಪ ಮನವಿ ಮಾಡಿದ್ದಾರೆ. ಹಿಂದೂಸ್ಥಾನವನ್ನು ಎರಡು ಮಾಡಿದ್ದು ರಾಹುಲ್ ಗಾಂಧಿ ಅವರ ಪೂರ್ವಜರು. ಈಗ ಭಾರತ ಜೋಡೊ ಎಂದು ಬಾಯಿಯಲ್ಲಿ ಹೇಳುತ್ತಿದ್ದಾರೆ. ಆದರೆ, ಅವರ ಮನಸ್ಸಿನಲ್ಲಿ ಭಾರತ ತೋಡೋ ಅಂತ ಇದೆ ಎಂದರು.
ಸಿದ್ದರಾಮಯ್ಯ ಹಾಗೂ ಅನಂತ ಕುಮಾರ್ ಹೆಗಡೆ ಇಬ್ಬರು ಸಹ ನಾಲ್ಕೈದು ದಿನ ಸುಮ್ಮನಿರಬೇಕು. ಅಲ್ಲದೇ, ಸಿಎಂ ಬೆಂಬಲಿಗರು ಸಹ ಟೀಕೆ ಮಾಡದೇ ರಾಮನ ಗುಣಗಾನ ಮಾಡಬೇಕೆಂದು ಮನವಿ ಮಾಡಿದರು. ರಾಮಭಕ್ತರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಬೇಕು ಎಂದರು. ಕೆಆರ್ಎಸ್ ಕಟ್ಟಲು ಟಿಪ್ಪು ಅಡಿಗಲ್ಲು ವಿಚಾರ : ಕೆ ಎನ್ ರಾಜಣ್ಣ ದೇಹದಲ್ಲಿ ಟಿಪ್ಪು ರಕ್ತ ಹರಿದಿದೆಯೇನೋ, ಅದಕ್ಕೆ ಅವರು ಕೆಆರ್ಎಸ್ ಕಟ್ಟಲು ಅಡಿಗಲ್ಲು ಹಾಕಿದ್ದರು ಎಂದು ಕೆ ಎಸ್ ರಾಜಣ್ಣನವರು ಹೇಳಿದಕ್ಕೆ ಪ್ರತಿಕ್ರಿಯಿಸಿದರು.
ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯೆ : ಲೋಕಸಭೆ ಚುನಾವಣೆ ನಂತರ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯೋದಿಲ್ಲ. ಯತೀಂದ್ರ ಹೇಳಿಕೆಗೆ ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಅವರು 5 ವರ್ಷ ಸಿದ್ದು ಮುಂದುವರೆಯುವುದನ್ನು ಹೇಳುವುದು ಹೈಕಮಾಂಡ್ ಎಂದು ಹೇಳುವ ಮೂಲಕ ಸಿದ್ದು ಮುಂದುವರೆಯುವುದು ಇಷ್ಟವಿಲ್ಲ ಎಂದು ಹೇಳಿದಂತೆ ಆಗಿದೆ ಎಂದರು.
ಇದನ್ನೂ ಓದಿ : ಶ್ರೀರಾಮ ಭಕ್ತರಿಗೆ ಮಾತ್ರ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ: ಕೆ ಎಸ್ ಈಶ್ವರಪ್ಪ