ಶಿವಮೊಗ್ಗ: ರಾಹುಲ್ ಗಾಂಧಿ ಹೋದ ಕಡೆಯಲ್ಲೆಲ್ಲಾ ಕಾಂಗ್ರೆಸ್ ಸೋತಿದೆ. ಹೀಗಾಗಿ ಅವರು ಶಿವಮೊಗ್ಗಕ್ಕೂ ಬರಲಿ ಎಂದು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು. ನಗರದ ರಾಷ್ಟ್ರಭಕ್ತ ಬಳಗದ ಚುನಾವಣಾ ಕಚೇರಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಶಿವಮೊಗ್ಗಕ್ಕೆ ಬರಲಿ, ಕಾಂಗ್ರೆಸ್ ಸೋಲಲಿ ಎಂದು ಆಶಿಸಿದರು.
ಸಿಎಂ ಸಿದ್ದರಾಮಯ್ಯನವರು ಮುಸ್ಲಿಂ ಸಮುದಾಯಕ್ಕೆ ಎಲ್ಲಾ ರೀತಿಯ ಸೌಲಭ್ಯ ಮಾಡಿಕೊಡಲಾಗುವುದು ಎಂದು ಹೇಳಿದ್ದು ನನಗೆ ನೋವು ತಂದಿದೆ. ಮುಸ್ಲಿಮರಿಗೆ ಸೌಲಭ್ಯ ಕೊಡಲು ಯಾವುದೇ ಹಿಂಜರಿಕೆ ಇಲ್ಲ ಎಂದು ಹೇಳಿದ್ದಾರೆ. ನೇಹಾ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಿದ್ದಾರೆ. ಸಿಐಡಿ ಸರ್ಕಾರದ ಬಳಿ ಇರುವ ಸಂಸ್ಥೆ. ಈಗಾಗಲೇ ಸಿಎಂ ಇದು ವೈಯಕ್ತಿಕವಾಗಿ ನಡೆದ ಕೊಲೆ ಎಂದು ಹೇಳಿದ್ದಾರೆ. ಇದರಿಂದಾಗಿ ಸಿಐಡಿ ಇನ್ನೇನು ವರದಿ ಕೊಡುತ್ತದೆ?. ಸಂತೋಷ್ ಲಾಡ್ ನೇಹಾ ಮನೆ ಪಿಕ್ನಿಕ್ ತಾಣವಾಗಿದೆ ಎಂದು ಹೇಳಿದ್ರು, ಹಾಗಾದ್ರೆ ನಿನ್ನೆ ಸಿಎಂ ಯಾಕೆ ಅಲ್ಲಿಗೆ ಹೋದ್ರು?. ಕಾಂಗ್ರೆಸ್ ಸರ್ವಜನಾಂಗದ ಶಾಂತಿಯ ತೋಟ ಎಂದು ಹೇಳಿ, ಮತ್ತೊಂದು ಕಡೆ ತುಷ್ಟೀಕರಣ ಮಾಡುತ್ತಿದೆ ಎಂದು ಆರೋಪಿಸಿದರು.
ಮಧು ಬಂಗಾರಪ್ಪ ಸರಿಯಾದ ಕನ್ನಡಕ ಖರೀದಿಸಲಿ. ನನ್ನ ನಾಮಪತ್ರ ಸಲ್ಲಿಕೆ ವೇಳೆ ಸೇರಿದ್ದು ಕೇವಲ 3 ಸಾವಿರ ಜನ ಎಂದು ಹೇಳಿದ್ದಾರೆ. ಅಂದು ಮಾಧ್ಯಮಗಳಲ್ಲಿ ಬಂದಿದ್ದನ್ನು ಅವರು ಹೊಸ ಕನ್ನಡಕ ಧರಿಸಿಕೊಂಡು ನೋಡಲಿ. ಕಾಂಗ್ರೆಸ್ ಸೋಲುತ್ತದೆ ಎಂದು ನಾನಲ್ಲ, ಕಾಂಗ್ರೆಸ್ ಸೋಲುತ್ತೆ ಅಂತ ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ ಎಂದರು.
ಚಿತ್ರನಟರನ್ನು ನೋಡಿ ಮತ ಹಾಕುವ ಮತದಾರರು ನಮ್ಮ ಜಿಲ್ಲೆಯಲ್ಲಿಲ್ಲ. ನಮ್ಮಲ್ಲಿ ಪ್ರಜ್ಞಾವಂತ ಮತದಾರರಿದ್ದಾರೆ. ಕಾಂಗ್ರೆಸ್‌ನವರು ಪೂರ್ಣ ಹತಾಶೆಯಲ್ಲಿದ್ದಾರೆ. ಮಧು ಬಂಗಾರಪ್ಪನವರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ಭ್ರಮೆಯಲ್ಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಮೇ.2ರಂದು ಶಿವಮೊಗ್ಗಕ್ಕೆ ರಾಹುಲ್ ಗಾಂಧಿ ಆಗಮನ: ಮಧು ಬಂಗಾರಪ್ಪ - Rahul Gandhi to Visit Shivamogga