ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಲೆಕ್ಕಾಧಿಕಾರಿಯಾಗಿದ್ದ ಚಂದ್ರಶೇಖರನ್ ಸಾವಿಗೆ ನ್ಯಾಯ ಒದಗಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ಬುಧವಾರ ಸಂಜೆ ಚಂದ್ರಶೇಖರನ್ ಅವರ ಮನೆಗೆ ಭೇಟಿ ನೀಡಿದ ಸಚಿವರು, ಮೃತರ ಪತ್ನಿ, ಇಬ್ಬರು ಮಕ್ಕಳು ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸುಮಾರು 20 ನಿಮಿಷಗಳ ಕಾಲ ಕುಟುಂಬಸ್ಥರೊಂದಿಗೆ ಮಾತನಾಡಿದ ಅವರು, ಮೃತ ಅಧಿಕಾರಿಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇಲ್ಲಿಗೆ ಸಿಎಂ ಸಿದ್ದರಾಮಯ್ಯ ಆದೇಶದ ಮೇರೆಗೆ ಚಂದ್ರಶೇಖರನ್ ಮನೆಗೆ ಭೇಟಿ ನೀಡಿದ್ದೇನೆ. ಭೇಟಿ ವೇಳೆ ಚಂದ್ರಶೇಖರನ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿರುವೆ. ಸೂಕ್ತ ತನಿಖೆ ನಡೆಸಲು ಸಿಎಂ ದೆಹಲಿಯಿಂದ ಈಗಾಗಲೇ ಸೂಚನೆ ನೀಡಿದ್ದಾರೆ. ಈಗಾಗಲೇ ತನಿಖೆ ಕೂಡ ಪ್ರಾರಂಭವಾಗಿದೆ. ನಾನು ಜಿಲ್ಲಾ ಉಸ್ತುವಾರಿ ಸಚಿವರಾಗಿ ನನ್ನ ಕರ್ತವ್ಯವನ್ನು ನಿರ್ವಹಿಸಲು ಭೇಟಿ ನೀಡಿದ್ದೇನೆ ಎಂದರು.
ಚಂದ್ರಶೇಖರನ್ ಅವರು ಕರ್ತವ್ಯದಲ್ಲಿದ್ದಾಗ ಇಂತಹ ಘಟನೆ ನಡೆದಿದೆ. ಹಾಗಾಗಿ ಅವರ ಕುಟುಂಬಕ್ಕೆ ಸಹಾಯವಾಗಬೇಕು ಎಂಬ ಕಾರಣದಿಂದ ಸಿಎಂ ಬಳಿ ಮೃತರ ಪತ್ನಿಯನ್ನು ಕರೆದುಕೊಂಡು ಹೋಗಲಾಗುವುದು. ತಮ್ಮ ಕುಟುಂಬದ ಬಗ್ಗೆ ಹಾಗೂ ತಮ್ಮ ಇಬ್ಬರು ಮಕ್ಕಳ ಓದು ಸೇರಿದಂತೆ ಎಲ್ಲವನ್ನು ಮೃತರ ಪತ್ನಿ ನನ್ನ ಮುಂದೆ ಹೇಳಿಕೊಂಡಿದ್ದಾರೆ. ಅವರ ಸಾವಿನ ಬಗ್ಗೆ ಇದೀಗ ತನಿಖೆ ನಡೆಯುತ್ತಿರುವುದರಿಂದ ಅದರ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲ್ಲ. ಇಲ್ಲಿ ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಬೇಕೆಂದು ಹೇಳಿದರು.
ಸಾವಿನ ವಿಚಾರದಲ್ಲಿ ನಾವು ಹೆಚ್ಚು ಪ್ರತಿಕ್ರಿಯೆ ನೀಡಲ್ಲ. ಸಾವಿಗೆ ನ್ಯಾಯ ಒದಗಿಸಬೇಕಿದೆ. ಒಂದು ಕುಟುಂಬದಲ್ಲಿ ಸಾವು ಆದಾಗ ದುಃಖ ಉಂಟಾಗಿರುತ್ತದೆ. ಅದನ್ನು ರಾಜಕೀಯವಾಗಿ ನೋಡುವುದು ಸರಿಯಲ್ಲ. ಎಲ್ಲದಕ್ಕೂ ರಾಜಕೀಯ ಬಣ್ಣ ನೀಡುವುದು ಸರಿಯಲ್ಲ. ನಮ್ಮದು ಜನರ ಆಶೀರ್ವಾದದ ಮೇಲೆ ಇರುವ ಸರ್ಕಾರ. ಇಲ್ಲಿ ಏನೂ ಘಟನೆಯಾಗಿದೆಯೋ ಅದರ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.