ವಿಜಯಪುರ: ರಾಜಕೀಯವಾಗಿ ನನಗೆ ವಿರೋಧ ಮಾಡಲು ಬಂದವರು ಯಾರೂ ರಾಜಕೀಯವಾಗಿ ಉಳಿದಿಲ್ಲ. ನರೇಂದ್ರ ಮೋದಿ ಅವರಿಗೆ ಹೇಗೆ ದೈವಿಶಕ್ತಿ ಇದೆಯೋ ಹಾಗೆ ವಿಜಯಪುರದಲ್ಲಿ ರಮೇಶ್ ಜಿಗಜಿಣಗಿಗೂ ದೈವಿ ಶಕ್ತಿ ಇದೆ. ಇಲ್ಲಿಯವರೆಗೆ ಇತಿಹಾಸ ನಿರ್ಮಾಣ ಮಾಡಿಕೊಂಡು ಬಂದಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು,ಇಲ್ಲಿಯವರೆಗೆ ರಾಜ್ಯದಲ್ಲಿ ಇತಿಹಾಸ ನಿರ್ಮಾಣ ಮಾಡಿರುವೆ. ರಾಜ್ಯದಲ್ಲಿ ದಲಿತನಾಗಿ ಯಾರು ಮಾಡಲಾರದಂತ ಕೆಲಸ ಮಾಡಿದ್ದೇನೆ. ಕಂದಾಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಚಿಕ್ಕೋಡಿಗೆ ಹೋಗಿ ಬೇರೆ ಬೇರೆ ಪಕ್ಷದಿಂದ ಮೂರು ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದೇನೆ ಇದು ಇತಿಹಾಸ ಅಲ್ವಾ? ಮುಂದೆಯೂ ಇತಿಹಾಸ ನಿರ್ಮಾಣ ಮಾಡುತ್ತೇನೆ ಎಂದು ತಿಳಿಸಿದರು.
ಗೋವಿಂದ ಕಾರಜೋಳ ನನ್ನ ಕಾಂಪಿಟೀಟರ್ ಅಲ್ಲ :ಗೋವಿಂದ ಕಾರಜೋಳ ನನ್ನ ಕಾಂಪಿಟೀಟರ್ ಅಲ್ಲ. ನಾನೂ ಬೆಳೆಸಿದ ಮನುಷ್ಯ. ಹಣ ಇದ್ದ ಮಾತ್ರಕ್ಕೆ ಕಾಂಪಿಟೇಟರ್ ಆಗಿ ಬಿಡುತ್ತಾರಾ? ನಾನು ಬಡ ಮನುಷ್ಯ ನಿಮ್ಮಂಥವರನ್ನು ಕಟ್ಟಿಕೊಂಡು ರಾಜಕಾರಣ ಮಾಡುವವ, ಅವರು ಟಿಕೆಟ್ ಕೇಳಿರಬಹುದು ಆದರೆ ಅದು ನನಗೆ ಗೊತ್ತಿಲ್ಲ ಎಂದರು.
ವಿಜಯಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಇನ್ನೆರಡು ದಿನಗಳಲ್ಲಿ ಘೋಷಣೆಯಾಗುತ್ತದೆ. ಆಕಾಂಕ್ಷಿ ಅಲ್ಲ,ಬಿಜೆಪಿ ಟಿಕೆಟ್ ನನಗೆ ಸಿಗುತ್ತದೆ, ಆದರೆ ನನಗೆ ಮತ್ತು ಜಿಲ್ಲಾಧ್ಯಕ್ಷರಿಗೆ ಎಲ್ಲಿಂದ ಮೆಸೇಜ್ ಬರಬೇಕು ಅಲ್ಲಿಂದ ಬಂದಿದೆ. ನನ್ನ ಟಿಕೆಟ್ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಅದು ದೇವರಿಗೆ ಮಾತ್ರ ಸಾಧ್ಯವಿದೆ ಎಂದು ಸಂಸದ ರಮೇಶ ಜಿಗಜಿಣಗಿ ವಿಶ್ವಾಸ ವ್ಯಕ್ತಪಡಿಸಿದರು.
ಬೇಕಾದಷ್ಟು ಹಣವಿದ್ದವರು ಹಣ ಕೊಡುತ್ತೇವೆಂದು ರಾಜಕೀಯದಲ್ಲಿ ತಿರುಗಾಡಲಿ, ಅದು ಕೆಲಸಕ್ಕೆ ಬರಲ್ಲ. ರಾಜಕೀಯವಾಗಿ ನನಗೆ ವಿರೋಧ ಮಾಡಲು ಬಂದವರು ಯಾರೂ ರಾಜಕೀಯವಾಗಿ ಉಳಿದಿಲ್ಲ, ನನಗೆ 71 ವರ್ಷ, ರಾಜಕಾರಣದಲ್ಲಿ ನಾನೂ ಉಳಿದಿದ್ದೇನಲ್ಲಾ, ಅಂಥವರು ಒಬ್ಬರಾದರೂ ಇದ್ದಾರಾ? ಅವರಿಗೆ ದೇವರು ಕೊಟ್ಟ ಶಿಕ್ಷೆ ಯಾರು ಏನು ಮಾಡಲಾಗಲ್ಲ ? ಎಂದು ಹೇಳಿದರು.
ನನ್ನ ಪರವಾಗಿ ಕೇಂದ್ರಕ್ಕೆ ಕಾರಜೋಳ ಪತ್ರ ಬರೆದಿದ್ದು ಗೊತ್ತಿಲ್ಲ, ನಾನೇನು ಅವರಿಗೆ ಪತ್ರ ಬರೆಯಲು ಹೇಳಿದ್ದೇನಾ? ನೀವಾದರೂ ಬರಿ ಎಂದು ಹೇಳಿದ್ರಾ ? ತಾವೇ ಪತ್ರ ಬರೆದುಕೊಂಡು ಹೋದರೆ ನಾನೇನು ಮಾಡಲಿ ಎಂದು .ತಿಳಿಸಿದರು.
ಇದನ್ನೂಓದಿ: ಸಿದ್ದರಾಮಯ್ಯ ಗ್ಯಾರಂಟಿ ವಿಫಲ, ಮೋದಿ ಗ್ಯಾರಂಟಿ ಬಗ್ಗೆ ಜನರಿಗೆ ವಿಶ್ವಾಸ: ದೇವೇಂದ್ರ ಫಡ್ನವಿಸ್