ಚಿಕ್ಕೋಡಿ: ರಾಜ್ಯದಲ್ಲಿ ಏನಾದರೂ ಉಚಿತವಾಗಿ ದೊರೆಯುತ್ತಿದೆ ಎಂದರೆ ಅದು ಭಯೋತ್ಪಾದನೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದ್ದಾರೆ. ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಭಯೋತ್ಪಾಧನೆ ಕೃತ್ಯಗಳು ಹೆಚ್ಚಾಗುತ್ತಿವೆ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದರೂ ಸಿಎಂ, ಡಿಸಿಎಂ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಮೌನವಾಗಿದ್ದಾರೆ.
ಖರ್ಗೆ ಅವರೇ ನೀವು ಏತಕ್ಕೆ ಸುಮ್ಮನಿದ್ದೀರಿ ದೇಶ ಮತ್ತು ರಾಜ್ಯದ ಜನತೆಗೆ ಇದರ ಬಗ್ಗೆ ಉತ್ತರಿಸಿ. ಒಬ್ಬ ರಾಜ್ಯಸಭಾ ಅಭ್ಯರ್ಥಿ ಗೆಲುವಿನ ಸಂಭ್ರಮಾಚರಣೆ ವೇಳೆ ಅದು ಕೂಡ ವಿಧಾನಸೌಧದಲ್ಲಿ ಈ ರೀತಿಯ ಘೋಷಣೆ ಕೇಳಿ ಬಂದರು ಯಾಕೆ ಈ ಬಗ್ಗೆ ಮೌನವಾಗಿದ್ದೀರಿ. ಪಾಕಿಸ್ತಾನವನ್ನು ಬೆಂಬಲಿಸಲು ಜನ್ಮತಾಳಿದ್ದೀರಾ? ನಿಮ್ಮನ್ನು ಭಾರತ ಮಾತೆ ಸೇರಿದಂತೆ ಕರ್ನಾಟಕದ ಜನರು ಕ್ಷಮಿಸಲ್ಲ ಎಂದು ಕಿಡಿಕಾರಿದರು.
ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯ ಶಾಂತಿಯುತವಾಗಿತ್ತು. ಇಂದು ಮತ್ತೆ ಸ್ಫೋಟಗಳು ಆರಂಭವಾಗಿವೆ. ರಾಹುಲ್ ಗಾಂಧಿ ಅವರು ತುಕ್ಡೆ ಗ್ಯಾಂಗ್‌ನೊಂದಿಗೆ ಹೋಗಿ ನಿಂತಿದ್ದಾರೆ. ಅವರು ಭಾರತ್ ಜೋಡೋ ಮಾಡಲು ಹೊರಟಿದ್ದೀರಾ ಅಥವಾ ವಿಭಜಿತ ಭಾರತ ಯಾತ್ರೆಗೆ ಹೊರಟಿದ್ದೀರಾ? ಕರ್ನಾಟಕದಲ್ಲಿ ಹಿಂದೂ ದೇವಾಲಯಗಳ ಮೇಲೆ ಶೇ.10ರಷ್ಟು ತೆರಿಗೆ ವಿಧಿಸಿದ್ದಾರೆ. ಕಾಂಗ್ರೆಸ್ ನಾಯಕರು ಹಿಂದೂ ದೇವಾಲಯದ ಹಣವನ್ನು ತೆಗೆದುಕೊಂಡು ಒಂದು ಸಮುದಾಯನ್ನು ಸಮಾಧಾನಪಡಿಸುವ ನೀತಿ ನಡೆಸುತ್ತಾರೆ. ಕರ್ನಾಟಕ ಸರ್ಕಾರ ಕಾಂಗ್ರೆಸ್‌ಗೆ ಎಟಿಎಂ ಆಗಿದೆ ಇಲ್ಲಿಂದ ಹಣ ಸಂಗ್ರಹಿಸಿ ಅದನ್ನು ದೆಹಲಿಯ ಜೋಳಿಗೆಗೆ ಹಾಕುತ್ತಿದ್ದಾರೆ. ಇದು ಭ್ರಷ್ಟಾಚಾರದಿಂದ ಕೂಡಿದ ತುಷ್ಟೀಕರಣದ ಸರಕಾರವಾಗಿದೆ ಎಂದು ವಾಗ್ದಾಳಿ ನಡೆಸಿದರು.
2014ಕ್ಕೂ ಮುನ್ನ ಭಾರತ ಆತ್ಮವಿಶ್ವಾಸ ಕಳೆದುಕೊಂಡಿತ್ತು. ಇದೀಗ ಮೋದಿಯವರ ನಾಯಕತ್ವದಲ್ಲಿ ಮುನ್ನಡೆದ ಭಾರತ ಇಂದು ಆತ್ಮವಿಶ್ವಾಸ ತುಂಬಿದ ಭಾರತವಾಗಿದೆ. ದೇಶದಲ್ಲಿ ಬದಲಾವಣೆಯಾಗಿದೆ. ಭಾರತವು ಸ್ವಾವಲಂಬಿ ಭಾರತವಾಗುವ ಸ್ಪರ್ಧೆಯಲ್ಲಿದೆ ಮತ್ತು ವೇಗದ ಗತಿಯಲ್ಲಿ ಮುನ್ನಡೆಯುತ್ತಿದೆ. UPIನಲ್ಲಿ ಪ್ರತಿದಿನ ಅಂದಾಜು 16,000 ಕೋಟಿ ರೂಪಾಯಿಗಳ ವಹಿವಾಟು ನಡೆಯುತ್ತದೆ, ಪ್ರತಿದಿನ ಜನ - ಔಷಧ ಕೇಂದ್ರಗಳು ಭಾರತದಲ್ಲಿ ತೆರೆದಿರುತ್ತವೆ. ನಿತ್ಯ 14 ಕಿಲೋಮೀಟರ್ ರೈಲ್ವೆ ಹಳಿಗಳು ನಿರ್ಮಾಣವಾಗುತ್ತಿವೆ. ನಿತ್ಯ 29 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ಆಗುತ್ತದೆ.
ಪ್ರತಿದಿನ 75,000 ಜನರು ಬಡತನ ರೇಖೆಯಿಂದ ಹೊರಬರುತ್ತಿದ್ದಾರೆ ಮತ್ತು 25 ಕೋಟಿ ಜನರು ಬಡತನ ರೇಖೆಯಿಂದ ಮೇಲಕ್ಕೆ ಏರಿದ್ದಾರೆ ಇದು ಬದಲಾಗುತ್ತಿರುವ ಭಾರತ ಎಂದೂ ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ವಿವರಿಸಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಜೆ ಪಿ ನಡ್ಡಾ ನೇತೃತ್ವದಲ್ಲಿ ಸಭೆ: ರಮೇಶ ಜಾರಕಿಹೊಳಿ ಗೈರು