ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲೂ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮುಂದುವರೆದಿದ್ದು, ಆರು ಕ್ಷೇತ್ರಗಳ ಪೈಕಿ ಬಿಜೆಪಿ ನಾಲ್ಕು, ಜೆಡಿಎಸ್ ಎರಡು ಕ್ಷೇತ್ರಗಳನ್ನು ಹಂಚಿಕೊಂಡಿವೆ. ನೈರುತ್ಯ ಶಿಕ್ಷಕರ ಕ್ಷೇತ್ರದ ಜೊತೆಗೆ, ದಕ್ಷಿಣ ಶಿಕ್ಷಕರ ಕ್ಷೇತ್ರವನ್ನೂ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಕುರಿತು ರಾಜ್ಯ ಬಿಜೆಪಿ ನಾಯಕರಿಗೆ ದೆಹಲಿ ವರಿಷ್ಠರು ಸಂದೇಶ ರವಾನಿಸಿದ್ದಾರೆ.
ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯಿಂದ ನಿಂಗರಾಜೇಗೌಡ ಅವರಿಗೆ ಟಿಕೆಟ್ ಅಂತಿಮಗೊಳಿಸಿ ಬಿಜೆಪಿ ಈ ಹಿಂದೆ ಹೆಸರು ಘೋಷಣೆ ಮಾಡಿತ್ತು. ಆದರೆ, ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್ ನಮಗೇ ಬೇಕು ಎಂದು ಜೆಡಿಎಸ್ ಬೇಡಿಕೆ ಇಟ್ಟಿದೆ. ಹಾಗಾಗಿ, ಘೋಷಿತ ಉಮೇದುವಾರಿಕೆಯನ್ನು ಬಿಜೆಪಿ ವಾಪಸ್ ಪಡೆದುಕೊಂಡಿದೆ. ರಾಜ್ಯದಲ್ಲಿ ಜೂನ್ 3ರಂದು ನಡೆಯಲಿರುವ ದಕ್ಷಿಣ, ವಾಯುವ್ಯ, ಈಶಾನ್ಯ ಸೇರಿದಂತೆ 6 ಕ್ಷೇತ್ರಗಳ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಪೈಕಿ ಈಗಾಗಲೇ ಬಿಜೆಪಿ 4 ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿ ಘೋಷಣೆ ಮಾಡಿದೆ.
ಆರು ಕ್ಷೇತ್ರಗಳನ್ನೂ ಮೈತ್ರಿಕೂಟಕ್ಕೆ ಉಳಿಸಿಕೊಂಡು ಮೇಲುಗೈ ಸಾಧಿಸಲು ಉಭಯ ಪಕ್ಷಗಳು ವರಿಷ್ಠರು ಸಲಹೆ ನೀಡಿದ್ದಾರೆ. ಜೆಡಿಎಸ್ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ನಾಳೆ ಅಂತಿಮಗೊಳಿಸುವ ನಿರೀಕ್ಷೆಯಿದೆ.
''ವಿಧಾನ ಪರಿಷತ್ ಚುನಾವಣೆಯ ಒಂದು ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಆಗಬೇಕಿದ್ದು, ಗುರುವಾರ ಸಭೆ ನಡೆಸಿ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇವೆ'' ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಗಳವಾರ ಹೇಳಿದ್ದಾರೆ. ಸದ್ಯ ಕೆ.ಟಿ.ಶ್ರೀಕಂಠೇಗೌಡ ಹಾಗೂ ವಿವೇಕಾನಂದ ಅವರ ನಡುವೆ ಪೈಪೋಟಿ ಇದೆ.
ವಿಧಾನ ಪರಿಷತ್ ಸದಸ್ಯರಾಗಿದ್ದ ಆಯನೂರು ಮಂಜುನಾಥ್ ಮತ್ತು ಮರಿತಿಬ್ಬೇಗೌಡ ರಾಜೀನಾಮೆ ನೀಡಿರುವುದರಿಂದ ತೆರವಾಗಿರುವ ಎರಡು ಸ್ಥಾನ ಹಾಗೂ ಡಾ.ಚಂದ್ರಶೇಖರ ಬಿ. ಪಾಟೀಲ, ಎ. ದೇವೇಗೌಡ, ಡಾ.ವೈ.ಎ.ನಾರಾಯಣಸ್ವಾಮಿ, ಎಸ್.ಎಲ್.ಭೋಜೇಗೌಡ ಅವರ ಅವಧಿಯು ಜೂನ್ 21 ರಂದು ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಒಟ್ಟು 6 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 16 ಕೊನೆಯ ದಿನವಾಗಿದೆ. ಮೇ 17ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು ಮೇ 20 ಕಡೆಯ ದಿನವಾಗಿದೆ. ಜೂನ್ 3ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಜೂನ್ 6ರಂದು ಮತ ಎಣಿಕೆ ಇದೆ.